ನ್ಯೂಆರ್ಲಿನ್ಸ್ : ಹೊಸ ವರ್ಷದ ಸಂಭ್ರಮಾಚರಣೆ ಸಂದರ್ಭದಲ್ಲಿ ಜನರ ಮೇಲೆ ಟ್ರಕ್ ಹರಿಸಿ 15 ಮಂದಿ ಸಾವಿಗೆ ಕಾರಣವಾಗಿದ್ದ ಮಾಜಿ ಸೈನಿಕ, ಇಸ್ಲಾಮಿಕ್ ಸ್ಟೇಟ್ ಗುಂಪಿನಿಂದ ಸ್ಫೂರ್ತಿ ಪಡೆದಿದ್ದ. ಕೃತ್ಯಕ್ಕೂ ಮುನ್ನ ಸಾಮಾಜಿಕ ಮಾಧ್ಯಮದಲ್ಲಿ ಆತ ಪೋಸ್ಟ್ ಮಾಡಿದ್ದ ವಿಡಿಯೊದಿಂದ ಇದು ತಿಳಿದುಬಂದಿದೆ ಎಂದು ಅಧ್ಯಕ್ಷ ಜೋ ಬೈಡನ್ ತಿಳಿಸಿದ್ದಾರೆ.
ಚಾಲಕನನ್ನು ಟೆಕ್ಸಾಸ್ ನಿವಾಸಿ, 42 ವರ್ಷದ ಶಂಶುದ್-ದೀನ್ ಜಬ್ಬಾರ್ ಎಂಬುದಾಗಿ ಗುರುತಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ವಾಹನದಲ್ಲಿ ಐಸಿಸ್ ಸಂಘಟನೆಯ ಬಾವುಟ ಇತ್ತು ಎಂದು ಎಫ್‌ಬಿಐ ತಿಳಿಸಿದೆ.
'ಜಬ್ಬಾರ್ ಒಬ್ಬ ಉಗ್ರ' ಎಂದು ಎಸ್ಪಿ ಆಯನ್ ಕಿರ್ಕ್‌ಪ್ಯಾಟ್ರಿಕ್ ಹೇಳಿದ್ದಾರೆ.
'ಇದೊಂದು ಭಯೋತ್ಪಾದಕ ಕೃತ್ಯ. ಇದರ ಹಿಂದೆ ಆರೋಪಿ ಒಬ್ಬನೇ ಇದ್ದನೆಂದು ನಂಬಲು ಸಾಧ್ಯವಿಲ್ಲ. ವಾಹನದಲ್ಲಿ ಕಚ್ಚಾ ಬಾಂಬ್‌ಗಳು ಸೇರಿದಂತೆ ಸ್ಫೋಟಕಗಳು ಪತ್ತೆಯಾಗಿದ್ದು, ಈ ಬಗ್ಗೆ ತನಿಖೆ ನಡೆಯುತ್ತಿದೆ' ಎಂದು ಎಫ್‌ಬಿಐ ಹೇಳಿದೆ.
ಈ ಕೃತ್ಯಕ್ಕಾಗಿ ಜಬ್ಬಾರ್ ಟ್ರಕ್ ಅನ್ನು ಬಾಡಿಗೆಗೆ ಪಡೆದಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಶಂಕಿತ ಹತನಾಗಿದ್ದಾನೆ.
2007ರಲ್ಲಿ ಅಮೆರಿಕ ಸೇನೆ ಸೇರಿದ್ದ ಜಬ್ಬಾರ್, ಮಾನವ ಸಂಪನ್ಮೂಲ ಹಾಗೂ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. 2009ರಿಂದ ಒಂದು ವರ್ಷ ಅಫ್ಗಾನಿಸ್ತಾನದಲ್ಲಿ ನಿಯೋಜನೆಗೊಂಡಿದ್ದ ಜಬ್ಬಾರ್, 2020ರಲ್ಲಿ ನಿವೃತ್ತನಾಗಿದ್ದ.