ಮುಂಬೈ: ಎಡಪಂಥೀಯ ಚಿಂತಕ ಗೋವಿಂದ ಪಾನ್ಸರೆ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದ ಪ್ರಕರಣದ ಆರು ಆರೋಪಿಗಳಿಗೆ ಹತ್ತು ವರ್ಷಗಳ ನಂತರ ಬಾಂಬೆ ಹೈಕೋರ್ಟ್ ಬುಧವಾರ ಜಾಮೀನು ನೀಡಿತು.
'ಸುದೀರ್ಘ ಸೆರೆವಾಸದ ಕಾರಣದಿಂದಾಗಿ ಆರು ಆರೋಪಿಗಳಿಗೆ ಜಾಮೀನು ನೀಡಲಾಗಿದೆ' ಎಂದು ನ್ಯಾಯಮೂರ್ತಿ ಅನಿಲ್ ಕಿಲೋರ್ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಸಚಿನ್ ಅಂದುರೆ, ಗಣೇಶ್ ಮಿಸ್ಕಿನ್, ಅಮಿತ್ ದಿಗ್ವೇಕರ್, ಅಮಿತ್ ಬಡ್ಡಿ, ಭರತ್ ಕುರಾನೆ ಮತ್ತು ವಾಸುದೇವ್ ಸೂರ್ಯವಂಶಿ ಜಾಮೀನು ಪಡೆದ ಆರೋಪಿಗಳು. ಇನ್ನೊಬ್ಬ ಆರೋಪಿ ವೀರೇಂದ್ರ ತವಾಡೆಯ ಜಾಮೀನು ಅರ್ಜಿಯನ್ನು ಪ್ರತ್ಯೇಕ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕಿಲೋರ್ ಅವರು, 2024ರ ಡಿಸೆಂಬರ್ 12ರಂದು ವಿಚಾರಣೆ ಪೂರ್ಣಗೊಳಿಸಿ, ತೀರ್ಪು ಕಾಯ್ದಿರಿಸಿದ್ದಾರೆ.
ಸಾಮಾಜಿಕ ಕಾರ್ಯಕರ್ತ ಮತ್ತು ಕಮ್ಯುನಿಸ್ಟ್ ಪಕ್ಷದ ನಾಯಕರಾಗಿದ್ದ ಪಾನ್ಸರೆ ಅವರು ತಮ್ಮ ಪತ್ನಿ ಉಮಾ ಅವರ ಜತೆಗೆ ಕೊಲ್ಹಾಪುರದ ಸಾಮ್ರಾತ್ ನಗರ ಪ್ರದೇಶದಲ್ಲಿ ತಮ್ಮ ಮನೆ ಸಮೀಪ ಇದ್ದಾಗ, ಬೈಕಿನಲ್ಲಿ ಬಂದ ಇಬ್ಬರು ಯುವಕರು ಗುಂಡು ಹಾರಿಸಿ ಪರಾರಿಯಾಗಿದ್ದರು. ನಾಲ್ಕು ದಿನಗಳ ನಂತರ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಪಾನ್ಸರೆ ನಿಧನರಾದರು.
ಪಾನ್ಸರೆ ಹತ್ಯೆ ಪ್ರಕರಣದಲ್ಲಿ ಒಟ್ಟು 10 ಮಂದಿಯನ್ನು ಬಂಧಿಸಿದ್ದು, ಇನ್ನು ಇಬ್ಬರು ತಲೆಮರೆಸಿಕೊಂಡಿದ್ದಾರೆ.