ಚಟ್ಟೋಗ್ರಾಮ್: ಇಸ್ಕಾನ್ ಸಂಸ್ಥೆಯ ಧಾರ್ಮಿಕ ಮುಖಂಡ, ದೇಶದ್ರೋಹ ಎಸಗಿದ ಆರೋಪದ ಮೇಲೆ ಬಂಧಿತರಾಗಿರುವ ಚಿನ್ಮಯಿ ಕೃಷ್ಣ ದಾಸ್ ಅವರಿಗೆ ಬಾಂಗ್ಲಾದೇಶದ ಚಟ್ಟೋಗ್ರಾಮ್ ನ್ಯಾಯಾಲಯ ಜಾಮೀನು ನಿರಾಕರಿಸಿದೆ ಎಂದು ಡೈಲಿ ಸ್ಟಾರ್ ವರದಿ ಮಾಡಿದೆ.
ಇಂದು ಭಾರಿ ಭದ್ರತೆ ನಡುವೆ ದಾಸ್ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಇಂದು ಬೆಳಿಗ್ಗೆ 11 ಮಂದಿ ಸುಪ್ರೀಂ ಕೋರ್ಟ್ ವಕೀಲರು ಚಿನ್ಮಯಿ ಕೃಷ್ಣ ದಾಸ್ ಅವರ ಜಾಮೀನು ಅರ್ಜಿ ವಿಚಾರಣೆಯಲ್ಲಿ ಭಾಗವಹಿಸಲು ಸಜ್ಜಾಗಿದ್ದರು ಎಂದು ವರದಿ ತಿಳಿಸಿದೆ.
ಈ ಸಂಬಂಧ ಡೈಲಿ ಸ್ಟಾರ್ ಜೊತೆ ಮಾತನಾಡಿರುವ ವಕೀಲ ಅಪೂರ್ವ ಕುಮಾರ್ ಭಟ್ಟಾಚಾರ್ಜಿ,'ದಾಸ್ ಅವರ ಜಾಮೀನಿಗಾಗಿ ನಾವು ಉನ್ನತ ನ್ಯಾಯಾಲಯಕ್ಕೆ ಹೋಗುತ್ತೇವೆ. ನಾನು ಈಗಾಗಲೇ ಚಿನ್ಮಯಿ ಅವರಿಂದ ವಕಾಲತ್ತಿಗೆ ಸಹಿ ಪಡೆದುಕೊಂಡಿದ್ದೇನೆ. ನಾನು ಸುಪ್ರೀಂ ಕೋರ್ಟ್ ಮತ್ತು ಚಟ್ಟೋಗ್ರಾಮ್ ಬಾರ್ ಅಸೋಸಿಯೇಷನ್‌ಗಳ ಸದಸ್ಯನಾಗಿದ್ದೇನೆ, ಹಾಗಾಗಿ, ಪ್ರಕರಣವನ್ನು ವರ್ಗಾಯಿಸಲು ನನಗೆ ಯಾವುದೇ ಸ್ಥಳೀಯ ವಕೀಲರಿಂದ ಅನುಮತಿ ಅಗತ್ಯವಿಲ್ಲ' ಎಂದಿದ್ದಾರೆ.
ಚಿನ್ಮಯಿ ಕೃಷ್ಣದಾಸ್ ಅವರ ಪರವಾಗಿ ವಾದ ಮಾಡಲು ಯಾವ ವಕೀಲರೂ ಹಾಜರಾಗದ ಕಾರಣ ಜನವರಿ 2ಕ್ಕೆ ಜಾಮೀನು ವಿಚಾರಣೆಯನ್ನು ನಿಗದಿ ಮಾಡಿ ಡಿಸೆಂಬರ್ 3ರಂದು ಮೆಟ್ರೊಪಾಲಿಟನ್ ಸೆಷನ್ಸ್ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ಸೈಫುಲ್ ಇಸ್ಲಾಂ ಅವರು ವಿಚಾರಣೆಯನ್ನು ಮುಂದೂಡಿದ್ದರು.
'ಬಾಂಗ್ಲಾದೇಶ ಸಮ್ಮಿಲಿತ ಸನಾತನಿ ಜಾಗರಣ್ ಜೋತ್'ನ ವಕ್ತಾರರಾದ ಚಿನ್ಮಯಿ ಕೃಷ್ಣದಾಸ್ ಅವರನ್ನು ನವೆಂಬರ್ 25ರಂದು ಢಾಕಾ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿತ್ತು. ಅವರಿಗೆ ಜಾಮೀನು ನಿರಾಕರಿಸಿದ ಚಟ್ಟೋಗ್ರಾಮದ ನ್ಯಾಯಾಲಯವು, ಜೈಲಿಗೆ ಕಳುಹಿಸಿತ್ತು.
ಚಿನ್ಮಯಿ ಕೃಷ್ಣದಾಸ್ ಅವರ ಬಂಧನ ವಿರೋಧಿಸಿ ಪ್ರತಿಭಟನೆಗಳು ನಡೆದು, ಹಿಂಸಾಚಾರಕ್ಕೆ ತಿರುಗಿದ್ದವು. ಒಬ್ಬ ವಕೀಲರ ಹತ್ಯೆ ನಡೆದ ಮೇಲಂತೂ ಪ್ರಕರಣವು ಗಂಭೀರ ಸ್ವರೂಪ ತಳೆದಿದೆ.
ಚಿನ್ಮಯಿ ಕೃಷ್ಣದಾಸ್ ಪರವಾಗಿ ವಾದ ಮಂಡಿಸದೆ ಇರಲೆಂದೇ ಸುಮಾರು 70 ವಕೀಲರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು 'ಬಾಂಗ್ಲಾದೇಶ ಸಮ್ಮಿಲಿತ ಸನಾತನಿ ಜಾಗರಣ್ ಜೋತ್' ಆರೋಪಿಸಿರುವುದಾಗಿ 'ಎನ್‌ಡಿಟಿವಿ' ವರದಿ ಮಾಡಿದೆ.