ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಾಚೌರಿ ಜಿಲ್ಲೆಯಲ್ಲಿ ಮಂಗಳವಾರ ನೆಲ ಬಾಂಬ್ ಸ್ಫೋಟದಲ್ಲಿ ಕನಿಷ್ಠ ಆರು ಸೇನಾ ಸಿಬ್ಬಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯೋಧರ ವಾಹನಗಳು ಬರುವ ಕುರಿತು ಖಚಿತ ಮಾಹಿತಿ ಮೇರೆಗೆ ಬಾಂಬ್ ಹೂತಿಟ್ಟಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.
ಸ್ಫೋಟದ ತೀವ್ರತೆಗೆ ವಾಹನಗಳಿಗೆ ಹಾನಿಯಾಗಿದ್ದು, ನಾಲ್ಕು ಅಡಿಯಷ್ಟು ನೆಲ ಕುಸಿದಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನೌಶೇರಾ ಕ್ಷೇತ್ರದ ಖಂಬಾ ಕೋಟೆ ಬಳಿ ಮಂಗಳವಾರ ಬೆಳಿಗ್ಗೆ 10.45ರ ಸುಮಾರಿಗೆ ಸೇನಾ ಯೋಧರು ಕರ್ತವ್ಯದಲ್ಲಿದ್ದರು. ಈ ವೇಳೆ ಒಬ್ಬ ಯೋಧ ನೆಲದ ಮೇಲೆ ಕಾಲಿಟ್ಟಾಗ ಸ್ಫೋಟ ಸಂಭವಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಗಾಯಗೊಂಡವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅವರ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.