ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ನ್ಯಾಷನಲ್ ಕಾನ್ಫರೆನ್ಸ್ (ಎನ್‌ಸಿ) ದಿಕ್ಕು ದೆಸೆಯಿಲ್ಲದ ಮತ್ತು ದೂರದೃಷ್ಟಿ ಇಲ್ಲದ ಸರ್ಕಾರ ನಡೆಸುತ್ತಿದೆ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.
'ನ್ಯಾಷನಲ್ ಕಾನ್ಫರೆನ್ಸ್ ದಿಕ್ಕು ದೆಸೆಯಿಲ್ಲದ ಮತ್ತು ದೂರದೃಷ್ಟಿಯಿಲ್ಲದ ಸರ್ಕಾರವನ್ನು ನಡೆಸುತ್ತಿದೆ.
ಸಾರ್ವಜನಿಕ ಪ್ರಾಮುಖ್ಯತೆಯ ಎಲ್ಲಾ ರಂಗಗಳಲ್ಲಿ ಪಕ್ಷವು ದಯನೀಯವಾಗಿ ವಿಫಲವಾಗಿದೆ. ಚುನಾವಣಾ ವೇಳೆ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಪಕ್ಷ ಈಡೇರಿಸಿಲ್ಲ. ಸರ್ಕಾರ ಸಾರ್ವಜನಿಕ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ' ಎಂದು ಜಮ್ಮು ಮತ್ತು ಕಾಶ್ಮೀರ ಬಿಜೆಪಿಯ ಮುಖ್ಯ ವಕ್ತಾರ ಸುನೀಲ್ ಸೇಥಿ ಹೇಳಿದ್ದಾರೆ.
'ಕಳೆದ ಎರಡು ತಿಂಗಳುಗಳಲ್ಲಿ, ನೀರು, ವಿದ್ಯುತ್, ಉದ್ಯೋಗ ಕೊರತೆ ಸೇರಿದಂತೆ ಸಾರ್ವಜನಿಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನ್ಯಾಷನಲ್ ಕಾನ್ಫರೆನ್ಸ್ ವಿಫಲವಾಗಿದೆ. ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪಕ್ಷದ ಹಿರಿಯ ನಾಯಕರು, ಸಾರ್ವಜನಿಕರ ವಿಶ್ವಾಸವನ್ನು ಕಳೆದುಕೊಂಡಿದ್ದಾರೆ' ಎಂದು ಸೇಥಿ ಟೀಕಿಸಿದ್ದಾರೆ.
ಕೇಂದ್ರಾಡಳಿತ ಪ್ರದೇಶದಲ್ಲಿ ಬಿಜೆಪಿ ಜನಪ್ರಿಯತೆ ಗಳಿಸುತ್ತಿದೆ. 2025ರಲ್ಲಿ ಪಕ್ಷವು ಪ್ರಬಲವಾಗಿ ಹೊರಹೊಮ್ಮುತ್ತದೆ. ನಗರ ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ಚುನಾವಣೆಗಳು ಸೇರಿದಂತೆ ಮುಂಬರುವ ಚುನಾವಣೆಗಳನ್ನು ಗೆಲ್ಲುತ್ತದೆ ಎಂದು ಬಿಜೆಪಿ ಪ್ರತಿಪಾದಿಸಿದೆ.