ಮಧೂರು: ಕುಂಬಳೆ ಸೀಮೆಯ ಪ್ರಮುಖ ನಾಲ್ಕು ದೇವಾಲಯಗಳಲ್ಲಿ ಒಂದಾದ ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇವಸ್ಥಾನದ ಪವಿತ್ರ ಮೂಲಸ್ಥಾನ ಕೌಡಿಂಕಾನ ಯಾತ್ರೆ 12ವರ್ಷಗಳ ನಂತರ ಜ. 14ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಯಾತ್ರೆಯ ಸಾರಥ್ಯ ವಹಿಸಲಿರುವ ಬ್ರಹ್ಮಶ್ರೀ ವಾಸುದೇವ ತಂತ್ರಿ ಅವರು ಸೀಮೆಯ ಇನ್ನೊಂದು ಪ್ರಮುಖ ದೇವಾಲಯ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀದೇವರ ದರ್ಶನ ಪಡೆದರು.
್ರಬ್ರಹ್ಮಶ್ರೀ ವಾಸುದೇವ ತಂತ್ರಿ ಅವರನ್ನು ಪೂರ್ಣ ಕುಂಭ ಸ್ವಾಗತ ನೀಡಿ ಬರಮಾಡಿಕೊಳ್ಳಲಾಯಿತು. ಮಧೂರು ದೇಗುಲದ ಕಾರ್ಯನಿರ್ವಹಣಾಧಿಕಾರಿ ಟಿ ರಾಜೇಶ್, ಮಧೂರು ಬ್ರಹ್ಮ ಕಲಶ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ ಮೊದಲಾದವರು ಉಪಸ್ಥಿತರಿದ್ದರು. ಅಡೂರಿನಿಂದ ತಮ್ಮ ಬಳಗದವರೊಂದಿಗೆ ಆಗಮಿಸಿದ ಬ್ರಹ್ಮಶ್ರೀ ವಾಸುದೇವ ತಂತ್ರಿ ತಂತ್ರಿ ಅವರಿಗೆ ಶ್ರೀದೇವರ ಪ್ರಸಾದ ವಿತರಿಸಲಾಯಿತು. ನಂತರ ಮಧೂರು ದೇವಸ್ಥಾನದಲ್ಲಿ ಮಾ. 27ರಿಂದ ಏ. 7ರ ವರೆಗೆ ನಡೆಯಲಿರುವ ಅಷ್ಟಬಂಧ ಬ್ರಹ್ಮಕಲಶ, ಮೂಡಪ್ಪ ಸಏವೆಯ ಬಗ್ಗೆ ಮಾಹಿತಿ ಪಡೆದುಕೊಂಡರು.
ಅಡೂರು ದೇಗುಲದಿಂದ ಆಗ್ನೇಯ ಭಾಗದ ಸುಮಾರು 10ಕಿ.ಮೀ ದೂರದ ದಟ್ಟ ಅರಣ್ಯ ಪ್ರದೇಶದಲ್ಲಿ ಕೌಡಿಂಕಾನ ಮೂಲಸ್ಥಾನವಿದ್ದು, ಬ್ರಹ್ಮಶ್ರೀ ವಾಸುದೇವ ತಂತ್ರಿ ಯಾತ್ರೆ ನಡೆಸಿ, ಮೂಲಮೃತ್ತಿಕೆಯೊಂದಿಗೆ ಆಗಮಿಸಲಿದ್ದಾರೆ. ಈ ಹಿಂದಿನ ಕೌಡಿಂಕಾನ ಯಾತ್ರೆಯನ್ನೂ ಬ್ರಹ್ಮಶ್ರೀ ವಾಸುದೇವ ತಂತ್ರಿ ಯಶಸ್ವಿಯಾಗಿ ನೆರವೇರಿಸಿದ್ದರು.