ನವದೆಹಲಿ: ಪಂಜಾಬ್ ಸರ್ಕಾರವನ್ನು ಗುರುವಾರ ತರಾಟೆಗೆ ತೆಗೆದುಕೊಂಡಿರುವ ಸುಪ್ರೀಂ ಕೋರ್ಟ್, ರೈತ ನಾಯಕ ಜಗಜೀತ್ ಸಿಂಗ್ ಡಲ್ಲೇವಾಲ್ ಅವರ ಉಪವಾಸವನ್ನು ಕೊನೆಗೊಳಿಸಲು ಯತ್ನ ನಡೆದಿದೆ ಎಂಬ ತಪ್ಪು ಚಿತ್ರಣವನ್ನು ಸರ್ಕಾರದ ಕೆಲವು ಅಧಿಕಾರಿಗಳು ಮತ್ತು ರೈತ ಮುಖಂಡರು ಮಾಧ್ಯಮಗಳ ಮೂಲಕ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಡಲ್ಲೇವಾಲ್ ನಡೆಸುತ್ತಿರುವ ಪ್ರತಿಭಟನೆಯನ್ನು ಕೊನೆಗೊಳಿಸುವಂತೆ ಕೋರ್ಟ್ ಯಾವತ್ತೂ ಸೂಚನೆ ನೀಡಿಲ್ಲ. ಅವರ ಆರೋಗ್ಯದ ಬಗ್ಗೆ ಮಾತ್ರ ಕೋರ್ಟ್ ಕಳವಳ ಹೊಂದಿದೆ, ಅವರಿಗೆ ವೈದ್ಯಕೀಯ ನೆರವನ್ನು ತಕ್ಷಣ ಒದಗಿಸಬೇಕು ಎಂಬುದಷ್ಟೇ ಕೋರ್ಟ್‌ನ ಇರಾದೆ ಎಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ್ ಮತ್ತು ಉಜ್ವಲ್ ಭೂಯಾನ್ ಅವರು ಇರುವ ವಿಭಾಗೀಯ ಪೀಠವು ಹೇಳಿದೆ.
ಸ್ಥಳದಲ್ಲಿನ ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುವ ರೀತಿಯಲ್ಲಿ ಕೆಲವು ರೈತ ಮುಖಂಡರು ಹಾಗೂ ಪಂಜಾಬ್ ಸರ್ಕಾರದ ಕೆಲವು ಅಧಿಕಾರಿಗಳು ಮಾಧ್ಯಮಗಳ ಮೂಲಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂಬಂತೆ ಕಾಣುತ್ತಿದೆ ಎಂದು ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.
'ಕೆಲವು ರೈತ ಮುಖಂಡರು ಡಲ್ಲೇವಾಲ್ ಅವರ ವಿಚಾರವಾಗಿ ಎಷ್ಟರಮಟ್ಟಿಗೆ ಸದುದ್ದೇಶ ಹೊಂದಿದ್ದಾರೆ ಎಂಬುದನ್ನು ನಾವು ಪರಿಶೀಲಿಸಬೇಕಿದೆ' ಎಂದು ಪೀಠವು ಹೇಳಿದೆ.
ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುವ ಯತ್ನ ನಡೆದಿದೆ ಎಂಬುದನ್ನು ಪಂಜಾಬ್‌ನ ಅಡ್ವೊಕೇಟ್ ಜನರಲ್ ಗುರ್ಮಿಂದರ್ ಸಿಂಗ್ ನಿರಾಕರಿಸಿದರು. ಉಪವಾಸವನ್ನು ಮುರಿಯದೆಯೇ ವೈದ್ಯಕೀಯ ನೆರವು ಪಡೆಯುವಂತೆ ಡಲ್ಲೇವಾಲ್ ಅವರ ಮನವೊಲಿಸುವ ಕೆಲಸ ನಡೆದಿದೆ ಎಂದು ಅವರು ತಿಳಿಸಿದರು.
ಡಲ್ಲೇವಾಲ್ ಅವರನ್ನು ಸನಿಹದ ಆರೋಗ್ಯ ಸೇವಾ ಕೇಂದ್ರಕ್ಕೆ ಕರೆದೊಯ್ಯುವಂತೆ ಡಿಸೆಂಬರ್ 20ರಂದು ತಾನು ನೀಡಿದ್ದ ಆದೇಶದ ಪಾಲನೆಯ ಬಗ್ಗೆ ಪ್ರಮಾಣಪತ್ರ ಸಲ್ಲಿಸುವಂತೆ ಪೀಠವು ಪಂಜಾಬ್‌ನ ಮುಖ್ಯ ಕಾರ್ಯದರ್ಶಿ ಹಾಗೂ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ಸೂಚನೆ ನೀಡಿದೆ. ಪ್ರಕರಣದ ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಿದೆ.
ಪ್ರತಿಭಟನೆಯಲ್ಲಿ ತೊಡಗಿದ್ದ ರೈತರಿಗೆ ಮೂರು ಕೃಷಿ ಕಾಯ್ದೆಗಳನ್ನು ಹಿಂಪಡೆದ ನಂತರದಲ್ಲಿ ನೀಡಿದ್ದ ಭರವಸೆಯಾದ ಕನಿಷ್ಠ ಬೆಂಬಲ ಬೆಲೆಗೆ ಕಾನೂನಿನ ಖಾತರಿ ಸೇರಿದಂತೆ ಬೇರೆ ಬೇರೆ ಭರವಸೆಗಳನ್ನು ಈಡೇರಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಬೇಕು ಎಂಬ ಮನವಿ ಇರುವ ಅರ್ಜಿಯ ವಿಚಾರವಾಗಿ ಕೇಂದ್ರಕ್ಕೆ ನೋಟಿಸ್ ಜಾರಿಗೆ ಪೀಠ ಆದೇಶಿಸಿದೆ.