ಲಖನೌ: ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ನನಗೆ ಒದಗಿಸಿದ್ದ ಭದ್ರತೆಯನ್ನು ಪೊಲೀಸರು ಹಿಂಪಡೆದಿದ್ದಾರೆ ಎಂದು ಆರೋಪಿಸಿರುವ ಮಾಜಿ ಕೇಂದ್ರ ಸಚಿವ ಸಂಜೀವ್ ಬಲ್ಯಾನ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಪತ್ರ ಬರೆದಿದ್ದಾರೆ.
ಉತ್ತರ ಪ್ರದೇಶದ ಮುಜಾಫರ್‌ನಗರ ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಸಂಸದರಾಗಿದ್ದ ಬಲ್ಯಾನ್ ಅವರು 2024ರವರೆಗೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಆದರೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಡಿಮೆ ಅಂತರದಿಂದ ಸೋತಿದ್ದರು.
ದೇವಸ್ಥಾನದ ಭೂಮಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವುದರ ವಿರುದ್ಧದ ಪ್ರತಿಭಟನೆ ನಡೆಸಲಾಗಿತ್ತು. ಇದಕ್ಕೆ ಪ್ರತೀಕಾರವಾಗಿ ಪೊಲೀಸರು ನನಗೆ ಒದಗಿಸಿದ್ದ ಭದ್ರತೆಯನ್ನು ಹಿಂಪಡೆದಿದ್ದಾರೆ ಎಂದು ಬಲ್ಯಾನ್ ಆರೋಪಿಸಿದ್ದಾರೆ.
'ಲೋಕಸಭಾ ಚುನಾವಣೆಯ ವೇಳೆ ನನ್ನ ಮೇಲೆ ದಾಳಿ ನಡೆದಿರುವುದು ನಿಮಗೆ ತಿಳಿದಿದೆ. ಭವಿಷ್ಯದಲ್ಲಿ ನನ್ನ ಮೇಲೆ ಯಾವುದೇ ದಾಳಿ ನಡೆದರೂ ಅದಕ್ಕೆ ರಾಜ್ಯ ಸರ್ಕಾರ ಮತ್ತು ಪೊಲೀಸ್ ಅಧಿಕಾರಿಗಳೆ ಜವಾಬ್ದಾರರಾಗಿರುತ್ತಾರೆ' ಎಂದು ಬಲ್ಯಾನ್ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
'ಮಾಜಿ ಕೇಂದ್ರ ಸಚಿವರನ್ನು ಈ ರೀತಿ ನಡೆಸಿಕೊಳ್ಳುತ್ತಿದ್ದರೆ, ಸಾಮಾನ್ಯ ಬಿಜೆಪಿ ಕಾರ್ಯಕರ್ತರು ಎದುರಿಸುತ್ತಿರುವ ಪರಿಸ್ಥಿತಿಯನ್ನು ಊಹಿಸಿಕೊಳ್ಳಿ' ಎಂದು ಬಲ್ಯಾನ್ ಬೇಸರ ಹೊರಹಾಕಿದ್ದಾರೆ.
2013ರ ಆಗಸ್ಟ್‌ನಲ್ಲಿ ನಾಗಲಾ ಮಾಡೋರ್ ಗ್ರಾಮದಲ್ಲಿ ನಡೆದ 'ಮಹಾಪಂಚಾಯತ್'ನಲ್ಲಿ ಭಾಗವಹಿಸಿ ಹಿಂಸಾಚಾರಕ್ಕೆ ಪ್ರಚೋದನೆ ನೀಡಿ, ನಿಷೇಧಾಜ್ಞೆ ಉಲ್ಲಂಘನೆ ಮತ್ತು ಕೋಮು ಗಲಭೆಗೆ ಪ್ರಚೋದನೆ ನೀಡಿದ ಆರೋಪವನ್ನು ಬಲ್ಯಾನ್ ಎದುರಿಸುತ್ತಿದ್ದಾರೆ.