ತಿರುವನಂತಪುರ: ವಯನಾಡ್‌ನ ಮಾನಂದವಾಡಿಯಲ್ಲಿ 'ನರಭಕ್ಷಕ' ಹುಲಿ ಸೆರೆ ಕಾರ್ಯಾಚರಣೆಯಲ್ಲಿ ತೊಡಗಿದ್ದ ಅರಣ್ಯ ಇಲಾಖೆ ಸಿಬ್ಬಂದಿ ಒಬ್ಬರ ಮೇಲೆ ಹುಲಿ ಶುಕ್ರವಾರ ದಾಳಿ ನಡೆಸಿದೆ. ಇದರಿಂದಾಗಿ ಭೀತಿ ಇನ್ನಷ್ಟು ಹೆಚ್ಚಿದೆ.
ಇಲಾಖೆಯ ಕ್ಷಿಪ್ರ ಕಾರ್ಯಪಡೆಯ (ಆರ್‌ಆರ್‌ಟಿ) ಸದಸ್ಯ, 28 ವರ್ಷದ ಜಯಸೂರ್ಯ ಅವರ ಕೈಗೆ ಹುಲಿ ದಾಳಿಯಿಂದ ಗಾಯವಾಗಿದೆ. ಕೂದಲೆಳೆ ಅಂತರದಲ್ಲಿ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಿಂಬದಿಯಿಂದ ಹುಲಿ ದಾಳಿ ನಡೆಸಿದ್ದು, ಜಾಗೃತರಾದ ಜಯಸೂರ್ಯ ತಮ್ಮಲ್ಲಿದ್ದ ರಕ್ಷಣಾ ಕವಚ ಅಡ್ಡಹಿಡಿದು ತಪ್ಪಿಸಿಕೊಂಡಿದ್ದಾರೆ. ಈ ಗೊಂದಲದಲ್ಲಿ ಕೈಗೆ ಗಾಯವಾಗಿದೆ. ಹುಲಿ ಅಷ್ಟೇ ವೇಗದಲ್ಲಿ ಸ್ಥಳದಿಂದ ಹೋಗಿದೆ.
ಸ್ಥಳೀಯರ ಪ್ರತಿಭಟನೆ: ಹುಲಿ ದಾಳಿಯಿಂದ ಮೃತಪಟ್ಟಿದ್ದ ಎಸ್ಟೇಟ್‌ನ ನೌಕರರಾದ ರಾಧಾ ಕುಟುಂಬ ಸದಸ್ಯರನ್ನು ಅರಣ್ಯ ಸಚಿವ ಎ.ಕೆ. ಸಸೀಂದ್ರನ್ ಭೇಟಿಯಾಗಿದ್ದರು. ಆಗ ಸ್ಥಳೀಯರು ಪ್ರತಿಭಟನೆ ನಡೆಸಿದರು.
ಸಚಿವರು ಶನಿವಾರದಂದು ಫ್ಯಾಷನ್ ಷೋ ವೀಕ್ಷಿಸಲು ತೆರಳಿದ್ದರು. ಅಲ್ಲದೆ, ಆ ಕಾರ್ಯಕ್ರಮದಲ್ಲಿ ಹಾಡೊಂದನ್ನು ಹಾಡಿದ್ದರು ಎಂಬುದು ಜನರ ಆಕ್ರೋಶಕ್ಕೆ ಕಾರಣವಾಗಿತ್ತು.
ಜನಾಕ್ರೋಶ ಗಮನಿಸಿದ ಪೊಲೀಸರು ಸಚಿವರನ್ನು ಬೇರೆಡೆ ಕರೆದೊಯ್ದರು. ಇದಕ್ಕೆ ಮುನ್ನ ಸಚಿವರು ಮೃತ ಕಾರ್ಮಿಕನ ಪುತ್ರನಿಗೆ ಹಂಗಾಮಿ ನೌಕರಿಯ ಕಾರ್ಯಾದೇಶ ಹಸ್ತಾಂತರಿಸಿದರು.
ಮುಖ್ಯಮಂತ್ರಿ ಅವರ ಸೂಚನೆಯಂತೆ ಹುಲಿ ಬೇಟೆಗೆ ಆದೇಶಿಸಲಾಗಿದೆ. ಹುಲಿ ವಿರುದ್ಧದ ಕಾರ್ಯಾಚರಣೆಯು ಪರಿಣಾಮಕಾರಿಯಾಗಿ ನಡೆದಿದೆ ಎಂದು ತಿಳಿಸಿದರು.
ಹುಲಿ ದಾಳಿ ನಡೆಸಿದ್ದ ಸ್ಥಳದ ಆಸುಪಾಸಿನಲ್ಲಿ ಕಾರ್ಯಾಚರಣೆ ಚುರುಕಿನಿಂದ ಸಾಗಿದೆ. ಸುಮಾರು 10 ತಂಡಗಳು ಈ ಕಾರ್ಯದಲ್ಲಿ ತೊಡಗಿವೆ.