ಕಾಸರಗೋಡು: ನಗರದ ಚೌಕಿಯ ಸಿಪಿಸಿಅರ್‍ಐ ಕೇಂದ್ರದಲ್ಲಿ ನಡೆದುಬರುತ್ತಿರುವ ಕೃಷ್ಯುತ್ಪನ್ನಗಳ ಪ್ರದರ್ಶನ ಅಗ್ರಿ-ಎಕ್ಸ್‍ಪೋದಲ್ಲಿ ಉತ್ತರಭಾರತದಲ್ಲಿ ಚಿರಪರಿಚಿತವಾಗಿರುವ ಬೇಲ್ ಹಣ್ಣಿನ ಬಗ್ಗೆ ಗುಜರಾತ್ ಗೋದ್ರಾದ ಸಂಸ್ಥೆಯೊಂದರ ಪ್ರತಿನಿಧಿಗಳು ನಮ್ಮ ಕೃಷಿಕರೊಂದಿಗೆ ಸಮಗ್ರ ಮಾಹಿತಿಯನ್ನು ಹಂಚಿಕೊಂಡರು.
ಅತ್ಯಂತ ಆರೋಗ್ಯದಾಯಕ ಪೇಯವಾಗಿರುವ ಬೇಲ್ ಹಣ್ಣಿನ ರಸವನ್ನು ಉತ್ತರಭಾರತದ ಜನತೆಗೆ ಪರಿಚಯಿಸಬೇಕಾದ ಅಗತ್ಯವಿಲ್ಲ. ಹಾದಿಬದಿ, ಗಲ್ಲಿಗಳಲ್ಲಿ ಔಷಧೀಯ ಗುಣವುಳ್ಳ ಈ ಪೇಯವನ್ನು ಮಾರಾಟಕ್ಕಿರಿಸಲಾಗುತ್ತಿದೆ. ಬಿಲ್ವ ಪತ್ರೆಯ ಎಲೆ ಶಿವನಿಗೆ ಅತ್ಯಂತ ಪ್ರಿಯವಾದ ವಸ್ತುವಾಗಿದೆ. ಬಿಲ್ವ ಪತ್ರೆಯ ದೊಡ್ಡ ಗಾತ್ರದ ಹಣ್ಣು ಇದಾಗಿದ್ದು, ಇದರ ಔಷಧೀಯ ಗುಣಗಳಿಂದ ಈ ಹಣ್ಣು ಹೆಚ್ಚು ಬಳಕೆಯಲ್ಲಿದೆ.
ಬೇಲ್ ಹಣ್ಣಿನ ಜ್ಯೂಸ್ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಮತ್ತು ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದರಲ್ಲಿ ಆ್ಯಂಟಿ ಆಕ್ಸಿಡೆಂಟ್ ಸಮೃದ್ಧವಾಗಿದ್ದು, ಹೃದಯ ಸಂಬಂಧಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಬೇಲ್ ಹಣ್ಣಿನಲ್ಲಿ ಬ್ಯಾಕ್ಟೀರಿಯಾ ಮತ್ತು ಪರಾವಲಂಬಿ ವಿರೋಧಿ ಗುಣಗಳಿದ್ದು ಅದು ಅತಿಸಾರವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಪೋಷಕಾಂಶ ಹೊಂದಿರುವ ಹಣ್ಣು ಇದಾಗಿದೆ. ಹೇಳಿ ಕೇಳಿ ಬಿಲ್ವಪತ್ರೆ ಪೂಜನೀಯ ಮರವಾಗಿದ್ದು, ಪವಿತ್ರ ಮರದ ಬಿಲ್ವಪತ್ರೆ ಎಲೆಗಳು ಶಿವನ ಪೂಜೆಗೆ ಹೆಚ್ಚು ಬಳಕೆಯಾಗುತ್ತದೆ. ಇದೇ ಕಾರಣಕ್ಕೆ ಇದನ್ನು ಶಿವನ ಮರ ಎಂದು ಕರೆಯಲಾಗುತ್ತದೆ. ಅಷ್ಟೇ ಮಹತ್ವ ಇದರ ಹಣ್ಣುಗಳಿಗೂ ಇದೆ. ಆರರಿಂದ ಏಳು ಕಿ.ಗ್ರಾಂ ತೂಗುವ ಬಿಲ್ವಪತ್ರೆ ಉತ್ತರಪ್ರದೇಶದಲ್ಲಿ ಬೆಳೆಯುತ್ತಿದೆ. ಬಡ್ಡಿಂಗ್‍ಮೂಲಕ ಸಸಿಗಳನ್ನು ತಯಾರಿಸಲಾಗುತ್ತಿದ್ದು, ಇದು ಮಧುಮೇಹಕ್ಕೂ ಉತ್ತಮ ಪೇಯವಾಗಿದೆ. ಗೋಮ ಯಶಿ ಎಂಬ ಪ್ರಭೇದದ ಮುಳ್ಳುರಹಿತ ಬಿಲ್ವಪತ್ರೆ ಮರಗಳನ್ನು ಉತ್ತರ ಭಾರತದಲ್ಲಿ ಅಬಿವೃದ್ಧಿಪಡಿಸಲಾಗಿದೆ. ಬೇಲ್ ಹಣ್ಣು ಜ್ಯೂಸ್ ಅಲ್ಲದೆ ಬೇಲ್ ಪೌಡರನ್ನೂ ಸಂಸ್ಥೆ ತಯಾರಿಸುತ್ತಿದೆ. ಬೆಲ್ಲ, ಸಕ್ಕರೆ ಸೇರಿಸದೆ ಇದರ ಜ್ಯೂಸ್ ತಯಾರಿಸಿ ಕುಡಿದರೆ ಆರೋಗ್ಯಕ್ಕೆ ಹೆಚ್ಚು ಗುಣಕರ ಎಂಬುದು ಸಂಸ್ಥೆ ಸಿಬ್ಬಂದಿ, ಚಿತ್ರದುರ್ಗ ನಿವಾಸಿ ಗಂಗಾಧರ್ ತಿಳಿಸುತ್ತಾರೆ. ಪುತ್ತೂರು ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಂದ ಆಗಮಿಸಿದ ಕೃಷಿಕರಿಗೆ ಮಂಗಳೂರು ಕೃಷಿ ವಿಜ್ಞಾನ ಕೇಂದ್ರದ ಡಾ. ರಮೇಶ್, ಕಾಸರಗೋಡು ಸಿಪಿಸಿಆರ್‍ಐ ವಿಜ್ಞಾನಿ ಡಾ. ರಾಜ್‍ಕುಮಾರ್ ಕೃಷ್ಯುತ್ಪನ್ನಗಳ ಬಗ್ಗೆ ಮಾಹಿತಿ ನೀಡಿದರು.
ಗಮನ ಸೆಳೆಯುತ್ತಿರುವ ಸ್ಟಾಲ್‍ಗಳು:
ಸಿಪಿಸಿಆರ್‍ಐ 109ನೇ ಸಂಸ್ಥಾಪನಾ ವರ್ಷಾಚರಣೆ ಅಂಗವಾಗಿ ಕ್ಯಾಂಪಸ್ ವಠಾರದಲ್ಲಿ ನೂರಕ್ಕೂ ಮಿಕ್ಕಿ ಕೃಷ್ಯುತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆ ಕಾರ್ಯಾಚರಿಸುತ್ತಿದ್ದು, ನಾನಾ ಕಡೆಯಿಂದ ಕೃಷಿಕರು ಭೇಟಿ ನೀಡುತ್ತಿದ್ದಾರೆ. ತೆಂಗು, ಕೊಕ್ಕೋ, ಗೇರುಬೀಜ, ಗೇರು ಹಣ್ಣು, ಬಾಳೆಕಾಯಿ ಸೇರಿದಂತೆ ವಿವಿಧ ವಸ್ತುಗಳಿಂದ ತಯಾರಿಸಿದ ಖಾದ್ಯ ವಸ್ತುಗಳು, ಪಾನೀಯಗಳು, ಕೃಷಿ ಯಂತ್ರೋಪಕರಣಗಳು, ಕೃಷಿ ಸಲಕರಣೆಗಳು, ಸಾವಯವ ಗೊಬ್ಬರ ಸೇರಿದಂತೆ ವಿವಿಧ ಉತ್ಪನ್ನಗಳು ಕೃಷಿ-ಎಕ್ಸ್‍ಪೋ ಪ್ರದರ್ಶನ ಹಾಗೂ ಮಾರಾಟ ಮಳಿಗೆ ಜನಾಕರ್ಷಣೆಗೆ ಕಾರಣವಾಗುತ್ತಿದೆ.