ಕಾಸರಗೋಡು: ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ, ಸಂಸದೆ ಜೆ.ಬಿ ಮೆತ್ತರ್ ನೇತೃತ್ವದಲ್ಲಿ 'ಮಹಿಳಾ ಸಾಹಸ್ ಕೇರಳ ಯಾತ್ರೆ'ಕಾಸರಗೋಡಿನ ಚೆರ್ಕಳದಿಂದ ಪ್ರಯಾಣ ಆರಂಭಿಸಿತು. ಎ.ಐ.ಸಿ.ಸಿ. ಪ್ರಧಾನ ಕಾರ್ಯದರ್ಶಿ, ಸಂಸದ ಕೆ.ಸಿ. ವೇಣುಗೋಪಾಲ್ ಅವರು ತ್ರಿವರ್ಣ ಧ್ವಜವನ್ನು ಜೆಬಿ ಮೆತ್ತರ್ ಅವರಿಗೆ ಹಸ್ತಾಂತರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು.
2026ರಲ್ಲಿ ರಾಜ್ಯದಲ್ಲಿ ಮಹಿಳಾ ಸ್ನೇಹಿ ಸರ್ಕಾರವನ್ನು ಆಡಳಿತಕ್ಕೇರಿಸುವಲ್ಲಿ ಈ ಯಾತ್ರೆ ನಾಂದಿಯಾಗಲಿದೆ ಎಂದು ಕೆ.ಸಿ.ವೇಣಗೋಪಾಲ್ ಹೇಳಿದರು. ಕೇರಳವನ್ನು ಇಂದು ಆಳುತ್ತಿರುವ ಸರ್ಕರದ ದುರಾಡಳಿತದಿಂದ ತಾಯಂದಿರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಕಾಸರಗೋಡಿನಲ್ಲಿ 14ಮಂದಿ ಸಿಪಿಎಂ ಹಂತಕರು ಜೈಲು ಪಾಲಾದ ನಂತರ 'ಮಹಿಳಾ ಸಾಹಸ್ ಕೇರಳ ಯಾತ್ರೆ' ಅಪರಾಧದ ವಿರುದ್ಧ ಹೋರಾಡುವ ಆಂದೋಲನವಾಗಿ ಬದಲಾಗಲಿದೆ ಎಂದು ತಿಳಿಸಿದರು.
ಸಂಸತ್ತಿನಲ್ಲಿ ಅಂಗೀಕಾರವಾಗಿರುವ ಮಹಿಳಾ ಮೀಸಲಾತಿ ಎಂದಿನಿಂದ ಜಾರಿಯಾಗಲಿದೆ ಎಂಬುದನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು. ಈ ವಿಷಯದಲ್ಲಿ ಕೇಂದ್ರ ಕಣ್ಣಾಮುಚ್ಚಾಲೆಯಾಡುತ್ತಿರುವುದಾಗಿ ತಿಳಿಸಿದರು.
ಕಾಸರಗೋಡಿನಿಂದ ಆರಂಭಗೊಂಡಿರುವ 'ಮಹಿಳಾ ಸಾಹಸ್ ಕೇರಳ ಯಾತ್ರೆ' 1474 ಕೇಂದ್ರಗಳ ಮೂಲಕ ಹಾದುಹೋಗಿ, ಸೆಪ್ಟೆಂಬರ್ 30 ರಂದು ತಿರುವನಂತಪುರದಲ್ಲಿ ಸಮಾರೋಪಗೊಳ್ಳಲಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ದೀಪದಾಸ್ ಮುನ್ಶಿ, ಕಾರ್ಯದರ್ಶಿಗಳಾದ ಪಿ.ಸಿ.ವಿಷ್ಣುನಾಥ್, ಮನ್ಸೂರ್ ಅಲಿಖಾನ್, ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕ ಅನ್ವರ್ ಸಾದತ್, ಕೆಪಿಸಿಸಿ ಉಪಾಧ್ಯಕ್ಷ ವಿ.ಪಿ. ಸಜೀಂದ್ರನ್, ಪ್ರಧಾನ ಕಾರ್ಯದರ್ಶಿ ಸನ್ನಿ ಸೆಬಾಸ್ಟಿಯನ್, ಪಿ.ಎಂ. ನಿಯಾಸ್, ಮಹಿಳಾ ಕಾಂಗ್ರೆಸ್ ರಾಷ್ಟ್ರೀಯ ಕಾರ್ಯದರ್ಶಿ ಫಾತಿಮಾ ರೋಷ್ನಾ, ರಾಷ್ಟ್ರೀಯ ಕಾರ್ಯಕಾರಿ ಸಮಿತಿ ಸದಸ್ಯೆ ಶಾನಿಮೋಲ್ ಉಸ್ಮಾನ್, ಜಿಲ್ಲಾ ಕಾಂಗ್ರೆಸ್ ಸಮಿತಿ ಅದ್ಯಕ್ಷ ಪಿ.ಕೆ. ಫೈಸಲ್, ಕೆಎಸ್‍ಯು ಅಧ್ಯಕ್ಷ ಅಲೋಶಿಯಸ್ ಕ್ಸೇವಿಯರ್, ಅಲ್ಪಸಂಖ್ಯಾತರ ಸೆಲ್ ಅಧ್ಯಕ್ಷ ಟಿಎಂ ಜಾಕೀರ್ ಹುಸೇನ್, ನೆಯ್ಯಟಿಂಗರ ಸನಲ್, ಐ.ಕೆ. ರಾಜು, ಹಕೀಂ ಕುನ್ನಿಲ್, ರಾಜ್ಯ ಉಪಾಧ್ಯಕ್ಷರಾದ ರಜನಿ ರಮಾನಂದ್, ಆರ್.ಲಕ್ಷ್ಮಿ, ಯು. ವಹೀದಾ, ವಿ.ಕೆ.ಮಿನಿ ಮೋಳ್, ಜಿಲ್ಲಾಧ್ಯಕ್ಷೆ ಮಿನಿ ಚಂದ್ರನ್ ಉಪಸ್ಥಿತರಿದ್ದರು.