ಶ್ರೀನಗರ: ಸೇನಾ ವಾಹನ ಕಮರಿಗೆ ಬಿದ್ದ ಪರಿಣಾಮ ಮೂವರುು ಸೇನಾ ಸಿಬ್ಬಂದಿ ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಈ ಅವಘಡ ನಡೆದಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಉತ್ತರ ಕಾಶ್ಮೀರ ಜಿಲ್ಲೆಯ ಎಸ್.ಕೆ ಪಯೆನ್ ಬಳಿ ಸೇನಾ ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಕಮರಿಗೆ ಬಿದ್ದಿದೆ.
ಬಂಡಿಪೋರಾ ಜಿಲ್ಲೆಯಲ್ಲಿ ಕರ್ತವ್ಯದಲಿದ್ದ ಭಾರತೀಯ ಸೇನೆಯ ವಾಹನವೊಂದು ಪ್ರತಿಕೂಲ ಹವಾಮಾನ ಹಾಗೂ ಕಡಿಮೆ ಗೋಚರತೆ ಕಾರಣ ಸ್ಕಿಡ್ ಆಗಿ ಕಮರಿಗೆ ಬಿದ್ದಿದೆ. ಅವಘಡದಲ್ಲಿ ಮೂವರು ಸೈನಿಕರು ಮೃತಪಟ್ಟಿದ್ದಾರೆ ಎಂದು ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
'ಸ್ಥಳೀಯರ ಸಹಾಯದಿಂದ ಗಾಯಗೊಂಡ ಸೈನಿಕರನ್ನು ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತೆಗೆ ಸಾಗಿಸಲಾಯಿತು. ಸಹಕರಿಸಿದ ಸ್ಥಳೀಯರಿಗೆ ಕೃತಜ್ಞತೆಗಳು. ದುಃಖತಪ್ತ ಕುಟುಂಬಗಳಿಗೆ ಸಂತಾಪಗಳು' ಎಂದು ಸೇನೆಯು ಪೋಸ್ಟ್‌ನಲ್ಲಿ ಬರೆದುಕೊಂಡಿದೆ.
ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಪೂಂಛ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಕರ್ನಾಟಕದ ಮೂವರು ಯೋಧರು ಹುತಾತ್ಮರಾಗಿದ್ದರು.