ಅಲಿಪುರದೌರ್: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಅತಿದೊಡ್ಡ ಸಂಚಿನ ಬಲಿಪಶು ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಗುರುವಾರ ಹೇಳಿದ್ದಾರೆ. ಹಾಗೆಯೇ, ಇಷ್ಟು ವರ್ಷಗಳು ಕಳೆದರೂ ಮಹಾನಾಯಕ (ನೇತಾಜಿ) ಕಣ್ಮರೆಯಾದ ವಿಚಾರ ರಹಸ್ಯವಾಗಿಯೇ ಉಳಿದಿದೆ ಎಂದು ವಿಷಾದಿಸಿದ್ದಾರೆ. ನೇತಾಜಿ ಜನ್ಮದಿನ. ಅವರು, ಒಡಿಶಾದ ಕಟಕ್‌ನಲ್ಲಿ 1897ರ ಇದೇ ದಿನ ಜನಿಸಿದರು.
ಅಲಿಪುರದೌರ್ ಜಿಲ್ಲೆಯ ಕಲ್ಚಿನಿಯಲ್ಲಿ ನಡೆದ ಸಾರ್ವಜನಿಕ ವಿತರಣಾ ಸಮಾರಂಭದಲ್ಲಿ ಮಮತಾ, ಸ್ವಾತಂತ್ರ್ಯವೀರನನ್ನು ಸ್ಮರಿಸಿಕೊಂಡಿದ್ದಾರೆ.
'ನೇತಾಜಿ ಅವರ ಜನ್ಮದಿನದ ಬಗ್ಗೆ ತಿಳಿದಿದೆ. ಆದರೆ, ಅವರು ನಾಪತ್ತೆಯಾಗಿರುವ ವಿಚಾರ ಇಷ್ಟು ವರ್ಷಗಳು ಕಳೆದರೂ ನಿಗೂಢವಾಗಿಯೇ ಉಳಿದಿದೆ. ಅವರು ಯಾವಾಗ ಮತ್ತು ಎಲ್ಲಿ ಮೃತಪಟ್ಟರು ಎಂಬುದು ಬೆಳಕಿಗೆ ಬಾರದಿರುವುದು ದುಃಖದ ವಿಚಾರ. ಅತಿದೊಡ್ಡ ಸಂಚಿನ ಬಲಿಪಶು ಅವರು. ದೇಶಕ್ಕಾಗಿ ಎಷ್ಟೆಲ್ಲ ಹೋರಾಟಗಳನ್ನು ಮಾಡಿದರು. ಆದರೆ, ಅವರು ಎಲ್ಲಿ ಕಳೆದುಹೋದರು ಎಂಬುದರ ಬಗ್ಗೆ ನಮಗೆ ಈವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ' ಎಂದು ಹೇಳಿದ್ದಾರೆ.
'ಸತ್ಯವನ್ನು ತಿಳಿದುಕೊಳ್ಳಲು ಆಗದ್ದಕ್ಕೆ ಮೂಡಿರುವ ಈ ವಿಷಾದವು ನಿರಂತರವಾಗಿ ಉಳಿದುಕೊಳ್ಳಲಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ತಮ್ಮ ಸರ್ಕಾರವು, ನೇತಾಜಿಗೆ ಸಂಬಂಧಿಸಿದ 64 ಕಡತಳನ್ನು ಸಾರ್ವಜನಿಕರ ವೀಕ್ಷಣೆಗೆ ಬಹಿರಂಗಪಡಿಸಿದೆ ಎಂದಿರುವ ಮಮತಾ, 'ದೇಶವನ್ನು ಮುನ್ನಡೆಸುವ ಸಲುವಾಗಿ ನೇತಾಜಿ ಅವರು ಧರ್ಮವನ್ನು ಮೀರಿ ಜನರಲ್ಲಿ ಅರಿವು ಮೂಡಿಸಿದ್ದರು' ಎಂದು ಶ್ಲಾಘಿಸಿದ್ದಾರೆ.