ಪುಣೆ: ಮಹಾರಾಷ್ಟ್ರದ ಸೋಲಾಪುರದ ಉಷ್ಣವಿದ್ಯುತ್ ಸ್ಥಾವರದಲ್ಲಿ ಕಲ್ಲಿದ್ದಲು ಜತೆಗೆ ಬಿದಿರು ಬಳಸುವ ಮೂಲಕ ಶುದ್ಧ ಇಂಧನ ಉತ್ಪಾದನೆಗೆ ರಾಷ್ಟ್ರೀಯ ಉಷ್ಣವಿದ್ಯುತ್ ನಿಗಮ (ಎನ್‌ಟಿಪಿಸಿ) ನಿರ್ಧರಿಸಿದೆ.
ವಿದ್ಯುತ್ ಉತ್ಪಾದಿಸಲು ಬಿದಿರನ್ನು ಜೈವಿಕವಾಗಿ ಬಳಸಿದ ದೇಶದ ಮೊದಲ ಉಷ್ಣ ವಿದ್ಯುತ್ ಉತ್ಪಾದನಾ ಯೋಜನೆ ಇದಾಗಿದೆ ಎಂದು ಮಹಾರಾಷ್ಟ್ರದ ಪರಿಸರ ಮತ್ತು ಸುಸ್ಥಿರ ಅಭಿವೃದ್ದಿ ಕುರಿತ ಮುಖ್ಯಮಂತ್ರಿ ಕಾರ್ಯಪಡೆಯ ಕಾರ್ಯನಿರ್ವಾಹಕ ಅಧ್ಯಕ್ಷ ಪಾಶಾ ಪಟೇಲ್ ಸೋಮವಾರ ತಿಳಿಸಿದರು.
ಸೋಲಾಪುರದ ಸೂಪರ್ ಥರ್ಮಲ್ ಪವರ್ ಸ್ಟೇಷನ್‌ನಲ್ಲಿ ದೇಶದ ಮೊದಲ ಜೈವಿಕ ಆಧರಿತ (ಬಿದಿರು) ಉಷ್ಣ ವಿದ್ಯುತ್ ಯೋಜನೆ ಕೈಗೆತ್ತಿಕೊಳ್ಳುವಂತೆ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಇತ್ತೀಚೆಗೆ ಎನ್‌ಟಿಪಿಸಿ ಅಧ್ಯಕ್ಷರಿಗೆ ಪ್ರಸ್ತಾವ ಕಳುಹಿಸಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಇಲ್ಲಿನ ಸೂಪರ್ ಥರ್ಮಲ್ ಪವರ್ ಸ್ಟೇಷನ್, ಕಲ್ಲಿದ್ದಲು ಮೂಲಕ 1,320 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಯೋಜನೆಯಾಗಿದೆ.
'ಇಂಧನ ಉತ್ಪಾದನೆಗೆ ಅಗತ್ಯವಿರುವ ಬಿದಿರನ್ನು ಸೋಲಾಪುರ ಮತ್ತು ಅಕ್ಕ ಪಕ್ಕದ ಪ್ರದೇಶಗಳ ರೈತರಿಂದ ಖರೀದಿಸಲಾಗುವುದು' ಎಂದು ಪಾಶಾ ಪಟೇಲ್ ತಿಳಿಸಿದ್ದಾರೆ.