ವಾಷಿಂಗ್ಟನ್: ಅಮೆರಿಕದಲ್ಲಿ ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅಪಪ್ರಚಾರ ನಡೆಸಿದ ರಷ್ಯಾ ಮತ್ತು ಇರಾನ್‌ನ ಎರಡು ಸಂಘಟನೆಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ.
ಇರಾನ್ ಮೂಲದ 'ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್' (ಐಆರ್‌ಜಿಸಿ) ಮತ್ತು ರಷ್ಯಾ ಮೂಲದ 'ರಷ್ಯನ್ ಮೇನ್ ಇಂಟಲಿಜೆನ್ಸ್ ಡೈರೆಕ್ಟರೇಟ್'ಗಳು (ಜಿಆರ್‌ಯು) ಮತದಾರರ ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಸುಳ್ಳು ಮಾಹಿತಿ ಹಬ್ಬಿಸಿ ಪ್ರಚಾರ ನಡೆಸಿವೆ ಎಂದು ಅಮೆರಿಕ ಆರೋಪಿಸಿದ್ದು, ಈ ಸಂಘಟನೆಗಳ ವಿರುದ್ಧ ನಿರ್ಬಂಧ ವಿಧಿಸಿದೆ.
ಈ ಎರಡೂ ಸಂಸ್ಥೆಗಳು ಅಮೆರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಮತದಾರರನ್ನು ವಿಭಜಿಸಲು ಯತ್ನಿಸುವ ಮೂಲಕ ಚುನಾವಣೆಯಲ್ಲಿ ಹಸ್ತಕ್ಷೇಪ ನಡೆಸಿವೆ ಎಂದು ಅಮೆರಿಕ ಆರೋಪಿಸಿದೆ.
ನಕಲಿ ವಿಡಿಯೊಗಳು, ಡೀಪ್‌ಫೇಕ್ ವಿಡಿಯೊಗಳು, ಸುಳ್ಳು ಸುದ್ದಿಗಳನ್ನು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳ ಮೂಲಕ ಪ್ರಚಾರ ನಡೆಸಿ ಮತದಾರರಿಗೆ ತಪ್ಪು ಮಾಹಿತಿ ರವಾನಿಸುವ ಕಾರ್ಯವನ್ನು ಅವು ನಿರ್ವಹಿಸಿವೆ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ತಿಳಿಸಿದೆ.
'ನಮ್ಮ ಚುನಾವಣಾ ಪ್ರಕ್ರಿಯೆಗಳು ಮತ್ತು ಸಂಸ್ಥೆಗಳನ್ನು ಇರಾನ್ ಮತ್ತು ರಷ್ಯಾದ ಸರ್ಕಾರಗಳು ಗುರಿಯಾಗಿಸಿ ಕಾರ್ಯ ನಿರ್ವಹಿಸಿವೆ' ಎಂದು ಭಯೋತ್ಪಾದನೆ ಮತ್ತು ಹಣಕಾಸು ಗುಪ್ತಚರ ವಿಭಾಗದ ಅಧೀನ ಕಾರ್ಯದರ್ಶಿ ಬ್ರಾಡ್ಲಿ ಟಿ. ಸ್ಮಿತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅಮೆರಿಕದ ಆರೋಪಗಳನ್ನು ರಷ್ಯಾ ಮತ್ತು ಇರಾನ್‌ನ ಅಧಿಕಾರಿಗಳು ನಿರಾಕರಿಸಿದ್ದಾರೆ. 'ಅನ್ಯ ದೇಶಗಳ ಆಂತರಿಕ ವ್ಯವಹಾರಗಳಲ್ಲಿ ರಷ್ಯಾ ಹಸ್ತಕ್ಷೇಪ ಮಾಡುವುದಿಲ್ಲ' ಎಂದು ವಾಷಿಂಗ್ಟನ್‌ನಲ್ಲಿರುವ ರಷ್ಯಾ ರಾಯಭಾರ ಕಚೇರಿಯ ವಕ್ತಾರರು ಪ್ರತಿಕ್ರಿಯಿಸಿದ್ದಾರೆ.