ಪಾಲಕ್ಕೋಡು: ಬುಡಕಟ್ಟು ಸಮುದಾಯಕ್ಕೆ ಸೇರಿದ ವಿದ್ಯಾರ್ಥಿನಿಯೊಬ್ಬಳು ಶಾಲೆಯ ಶೌಚಾಲಯ ಗುಡಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಶಾಲೆಯ ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಲಾಗಿದೆ ಎಂದು 'ಇಂಡಿಯಾ ಟುಡೇ' ವರದಿ ಮಾಡಿದೆ.
ಪಾಲಕ್ಕೋಡುನಲ್ಲಿರುವ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದ್ದು, ಶಾಲೆಯಲ್ಲಿ 1ರಿಂದ 8ನೇ ತರಗತಿಯವರೆಗೆ ಬುಡಕಟ್ಟು ಸಮುದಾಯಕ್ಕೆ ಸೇರಿದ ಸುಮಾರು 150 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ವಿಡಿಯೊದಲ್ಲಿ ಶಾಲೆಯ ಸಮವಸ್ತ್ರ ಧರಿಸಿರುವ ವಿದ್ಯಾರ್ಥಿನಿಯೊಬ್ಬಳು ಕೈಯಲ್ಲಿ ಪೊರಕೆ ಹಿಡಿದು ಶೌಚಾಲಯವನ್ನು ಗುಡಿಸುತ್ತಿರುವುದು ಕಾಣಬಹುದಾಗಿದೆ.
'ಶಾಲೆಯ ಆವರಣವನ್ನು ಸ್ವಚ್ಛಗೊಳಿಸುವುದು, ಶೌಚಾಲಯ ಶುಚಿಗೊಳಿಸುವುದು, ನೀರು ತರುವುದು ಸೇರಿ ಅನೇಕ ಕೆಲಸಗಳನ್ನು ಮಕ್ಕಳೇ ನಿರ್ವಹಿಸುವುದರಿಂದ ಆಯಾಸದಿಂದ ಮನೆಗೆ ಮರಳುತ್ತಾರೆ' ಎಂದು ಪೋಷಕರು ಆರೋಪಿಸಿದ್ದಾರೆ.
'ನಾವು ಮಕ್ಕಳನ್ನು ಓದಲು ಶಾಲೆಗೆ ಕಳುಹಿಸುತ್ತೇವೆ ಹೊರತು ಶೌಚಾಲಯ ಗುಡಿಸುವುದಕ್ಕಲ್ಲ. ಈ ರೀತಿಯಾಗಿ ಮಕ್ಕಳನ್ನು ನಡೆಸಿಕೊಳ್ಳುತ್ತಿರುವುದರಿಂದ ಮಕ್ಕಳ ಶಿಕ್ಷಣ ಹಾಗೂ ಯೋಗ ಕ್ಷೇಮಕ್ಕೆ ಧಕ್ಕೆಯಾಗುತ್ತಿದೆ. ಶಿಕ್ಷಕರಿಗೆ ಜವಾಬ್ದಾರಿಯಿಲ್ಲ ಎಂಬುವುದನ್ನು ಇದು ತೋರಿಸುತ್ತಿದೆ' ಎಂದು ಪೋಷಕರೊಬ್ಬರು ಆಕ್ರೋಶ ಹೊರಹಾಕಿದ್ದಾರೆ.
ವಿಡಿಯೊ ಹರಿದಾಡುತ್ತಲೇ ಎಚ್ಚೆತ್ತ ಜಿಲ್ಲಾ ಶಿಕ್ಷಣಾಧಿಕಾರಿ, ಮುಖ್ಯೋಪಾಧ್ಯಾಯರನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.