ಮಹಾಕುಂಭ ನಗರ/ ಲಖನೌ: ಆಧ್ಯಾತ್ಮಿಕತೆ ಮತ್ತು ನಂಬಿಕೆ, ಸಂಸ್ಕೃತಿ ಮತ್ತು ಧರ್ಮ ಹಾಗೂ ಸಂಪ್ರದಾಯ ಮತ್ತು ಆಧುನಿಕ ತಂತ್ರಜ್ಞಾನವು ಪ್ರಯಾಗ್ರಾಜ್ನ ಸಂಗಮದಲ್ಲಿ (ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳು ಕೂಡುವ ಸ್ಥಳ) ಒಂದಾಗಿ ಬೆಸೆದುಕೊಂಡಿದೆ.
12 ವರ್ಷಗಳ ಬಳಿಕ ನಡೆಯುತ್ತಿರುವ ಮಹಾಕುಂಭ ಮೇಳಕ್ಕೆ ಸೋಮವಾರ ವಿದ್ಯುಕ್ತ ಆರಂಭ ಲಭಿಸಿದ್ದು, ಮುಂದಿನ 45 ದಿನಗಳಲ್ಲಿ 40 ಕೋಟಿಗೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಹಿಂದೂ ಸಂತರ ವೇಷ ಧರಿಸಿದ ವಿದೇಶಿ ಭಕ್ತರ ಉಪಸ್ಥಿತಿಯು ಕುಂಭಮೇಳದ ಆಕರ್ಷಣೆ ಮಾತ್ರವಲ್ಲದೆ, ಜಗತ್ತಿನ ಅತ್ಯಂತ ದೊಡ್ಡ ಧಾರ್ಮಿಕ ಉತ್ಸವದ ದೈವಿಕ ಕಳೆಯನ್ನು ಹೆಚ್ಚಿಸಿದೆ.
ಫ್ರಾನ್ಸ್, ಅಮೆರಿಕ, ದಕ್ಷಿಣ ಆಫ್ರಿಕಾ, ರಷ್ಯಾ, ಉಕ್ರೇನ್, ಬ್ರೆಜಿಲ್, ಇಟಲಿ ಮತ್ತು ಸ್ಪೇನ್ ಒಳಗೊಂಡಂತೆ ವಿವಿಧ ದೇಶಗಳ ಪುರುಷ ಹಾಗೂ ಮಹಿಳಾ ಭಕ್ತರು ಸೋಮವಾರ ಪವಿತ್ರ ಸ್ನಾನ ಮಾಡಿದರು.
ಈಗ 'ಬಾಬಾ ಮೋಕ್ಷಪುರಿ' ಎಂಬ ಹೆಸರಿನಿಂದ ಕರೆಯಲ್ಪಡುವ ಅಮೆರಿಕದ ಮಾಜಿ ಸೈನಿಕ ಮೈಕಲ್, ಇದೇ ಮೊದಲ ಬಾರಿ ಕುಂಭಮೇಳದಲ್ಲಿ ಪವಿತ್ರ ಸ್ನಾನ ಮಾಡಿದರು.
'ನಾನು ಎಲ್ಲರಂತೆಯೇ ಕುಟುಂಬವನ್ನು ಹೊಂದಿರುವ ಸಾಮಾನ್ಯ ವ್ಯಕ್ತಿಯಾಗಿದ್ದೆ. ಆದರೆ ಜೀವನದಲ್ಲಿ ಯಾವುದೂ ಶಾಶ್ವತವಲ್ಲ ಎಂಬುದನ್ನು ಅರಿತುಕೊಂಡೆ. ಮೋಕ್ಷಕ್ಕಾಗಿ ಹುಡುಕಾಟ ಪ್ರಾರಂಭಿಸಿದೆ. ಈಗ ಸನಾತನ ಧರ್ಮದ ಪ್ರಚಾರಕ್ಕೆ ಜೀವನ ಮುಡಿಪಾಗಿಟ್ಟಿದ್ದೇನೆ' ಎಂದರು.
'ಇದೊಂದು ಅದ್ಭುತ ಕ್ಷಣ. ಇಂತಹ ಕಾರ್ಯಕ್ರಮವನ್ನು ಹಿಂದೆಂದೂ ನೋಡಿಯೇ ಇಲ್ಲ' ಎಂದು ಸ್ಪೇನ್ನ ಕ್ರಿಸ್ಟಿನಾ ಪ್ರತಿಕ್ರಿಯಿಸಿದರು.
'ನಾನು ಮೊದಲ ಬಾರಿಗೆ ಇಲ್ಲಿಗೆ ಬಂದಿದ್ದು, ಇದೊಂದು ಅಪೂರ್ವ ಅನುಭವವಾಗಿದೆ. ಸಂಗಮದಲ್ಲಿ ಸ್ನಾನ ಮಾಡಲು ಇಷ್ಟೊಂದು ಜನ ಇಲ್ಲಿಗೆ ಬಂದಿದ್ದಾರೆ ಎಂದರೆ ನಂಬುವುದು ಕಷ್ಟ. ಅದನ್ನು ನಂಬಲು ಇಲ್ಲಿಗೆ ಬಂದು ನೋಡಬೇಕು' ಎಂದು ರಷ್ಯಾದಿಂದ ಬಂದ ಮಹಿಳೆಯೊಬ್ಬರು ಹೇಳಿದರು. ಅವರು ಸಂಗಮದಲ್ಲಿ ಪವಿತ್ರ ಸ್ನಾನವನ್ನೂ ಮಾಡಿದರು.
13 ಆಖಾಡಾಗಳು ಭಾಗಿ: ಕುಂಭ ಮೇಳದಲ್ಲಿ ಸಾಧು ಸಂತರ 13 ಆಖಾಡಾಗಳು (ಗುಂಪು) ಭಾಗವಹಿಸಿವೆ. ನಾಗಾ-ಸಾಧುಗಳು, ಅಘೋರಿಗಳು ಸೇರಿದಂತೆ ದೇಶದಾದ್ಯಂತ ವಿವಿಧ ರಾಜ್ಯಗಳ ಸಾಧು ಸಂತರು ಈ ಕುಂಭಮೇಳದಲ್ಲಿ ಭಾಗವಹಿಸಿರುವುದು ವಿಶೇಷ.
ದೇಶದ ಹಲವು ರಾಜ್ಯಗಳಿಂದ ಬಂದ ಭಕ್ತರ ಗುಂಪು ಪ್ರಯಾಗ್ರಾಜ್ನ ವಿವಿಧ ಸ್ನಾನಘಟ್ಟಗಳಲ್ಲಿ ಕಂಡುಬಂದಿತು. ಉತ್ತರ ಪ್ರದೇಶದ ಸಿದ್ಧಾರ್ಥನಗರದಿಂದ ಬಂದ ಮಹಿಳೆಯರ ತಂಡವೊಂದು ಜನಪದ ಗೀತೆಗಳನ್ನು ಹಾಡುವುದರಲ್ಲಿ ನಿರತವಾಗಿತ್ತು.
ಜಪಾನ್ ಮತ್ತು ದಕ್ಷಿಣ ಕೊರಿಯಾದಿಂದ ಬಂದ ಯೂಟ್ಯೂಬರ್ಗಳು ಪ್ರಯಾಗ್ರಾಜ್ನ ವಿವಿಧ ದೃಶ್ಯಗಳನ್ನು ಸೆರೆಹಿಡಿಯುವುದರಲ್ಲಿ ತೊಡಗಿದ್ದರು.
ಡಿಜಿಟಲ್ ಯುಗದಲ್ಲಿ, ಮಹಾಕುಂಭ ಮೇಳವು ಸಾಮಾಜಿಕ ಮಾಧ್ಯಮಗಳಲ್ಲೂ ಟ್ರೆಂಡಿಂಗ್ ಆಗಿದೆ. ಫೋಟೊ ಮತ್ತು ವಿಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಭಕ್ತರು ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅನೇಕ ಮಂದಿ ತಮ್ಮ ಕುಟುಂಬದ ಸದಸ್ಯರಿಗೆ ವಿಡಿಯೊ ಕರೆ ಮೂಲಕ ಗಂಗೆಯ ವರ್ಚುವಲ್ 'ದರ್ಶನ' ನೀಡಿದರು.