ಬದಿಯಡ್ಕ: ಕಾಸರಗೋಡಿನಲ್ಲಿ ಕನ್ನಡ ಪರ ವಾತಾವರಣ ಇನ್ನೂ ನೆಲೆನಿಂತಿದೆ. ಶೈಕ್ಷಣಿಕ, ಅಧ್ಯಯನಪರವಾದ ಚಟುವಟಿಕೆಗಳೇ ಇಲ್ಲಿ ಸವಾಲುಗಳ ನಡುವೆಯೂ ಕನ್ನಡ ಭದ್ರವಾಗಿರಲು ಕಾರಣವಾಗಿದ್ದು, ಈ ನಿಟ್ಟಿನಲ್ಲಿ ಪ್ರೊ.ಪಿ.ಶ್ರೀಕೃಷ್ಣ ಭಟ್ಟರಂತಹ ಹಲವು ಭೀಮ ವಿದ್ವಾಂಸರೇ ಕಾರಣ ಎಂದು ವಿಶ್ರಾಂತ ಕುಲಪತಿ, ಖ್ಯಾತ ಸಂಶೋಧಕ ಡಾ.ಬಿ.ಎ.ವಿವೇಕ ರೈ ಅಭಿಪ್ರಾಯ ವ್ಯಕ್ತಪಡಿಸಿದರು.
ಭಾನುವಾರ ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು ವಿದ್ಯಾಲಯದಲ್ಲಿ ನಡೆದ ಹಿರಿಯ ವಿದ್ವಾಂಸ, ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ.ಪಿ.ಶ್ರೀಕೃಷ್ಣ ಭಟ್ ಅವರ ಸಹಸ್ರಚಂದ್ರ ದರ್ಶನ ಅಭಿನಂದನಾ ಸಮಾರಂಭದಲ್ಲಿ ಅಪರಾಹ್ನ ನಡೆದ ಪಿ.ಶ್ರೀಕೃಷ್ಣ ಭಟ್ ಅವರನ್ನು ಅಭಿನಂದಿಸಿ ಅವರು ಮಾತನಾಡಿದರು.
ಭಾಷೆಗೆ ಸೌಂದರ್ಯ ತರುವುದು ವ್ಯಾಕರಣ, ಛಂದಸ್ಸುಗಳಿಂದ. ಪ್ರಾಚೀನ ಕನ್ನಡ ಭಾಷೆ, ಸಾಹಿತ್ಯದ ಶ್ರೀಮಂತಿಕೆ ಮಿತಿಯಿಲ್ಲದ ಫ್ರೌಢಿಮೆಯಿಂದೊಡಗೂಡಿ ವಿದ್ವಜ್ಜನರ ಅಧ್ಯಯನ-ಸಂಶೋಧನೆಗಳಿಗೆ ತೆರೆದುಕೊಂಡು ಇಂದಿಗೂ ಹಚ್ಚಹಸುರಾದ ಸೌರಭವನ್ನುಳಿಸಿಕೊಂಡಿದೆ. ರಸಮಯವಾದ ಸಾಹಿತ್ಯ, ಭಾಷೆಯನ್ನು ಸರಕ್ಷಿತವಾಗಿ ಬೆಳೆಸುತ್ತದೆ. ಕಾಸರಗೋಡು ಸಹಿತ ಕರಾವಳಿಯ ಕನ್ನಡ ಪಂಡಿತ ಪರಂಪರೆ ಈ ನಿಟ್ಟಿನಲ್ಲಿ ಸುಧೀರ್ಘ ಪಯಣ ಹೊಂದಿದೆ ಎಂದವರು ವಿಶ್ಲೇಶಿಸಿ, ಪ್ರೊ.ಪಿ.ಶ್ರೀಕೃಷ್ಣ ಭಟ್ ಅವರ ವ್ಯಾಕರಣ ಸಂಶೋಧನೆ, ಅಧ್ಯಯನಗಳನ್ನು ಶ್ಲಾಘಿಸಿದರು.
ವಿಶ್ರಾಂತ ಪ್ರಾಂಶುಪಾಲ, ಹಿರಿಯ ಸಾಹಿತಿ ಪ್ರೊ.ಪಿ.ಎನ್.ಮೂಡಿತ್ತಾಯ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಕರ್ನಾಟಕ ಸಮಿತಿ ಅಧ್ಯಕ್ಷ ವಕೀಲ ಮುರಳೀಧರ ಬಳ್ಳಕ್ಕುರಾಯ, ಕ.ಸಾ.ಪ.ಜಿಲ್ಲಾಧ್ಯಕ್ಷ ಡಾ.ಜಯಪ್ರಕಾಶನಾರಾಯಣ ತೊಟ್ಟೆತ್ತೋಡಿ, ಕೇರಳ ಪ್ರಾಂತ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ., ಶ್ರೀಕೃಷ್ಣ ಭಟ್ಟರ ಸುಪುತ್ರಿ ಡಾ.ರೂಪಶ್ರೀ ಆರ್.ಕೆ. ಅಭಿನಂದಿಸಿ ಮಾತನಾಡಿದರು. ವಿಶ್ರಾಂತ ಪ್ರಾಧ್ಯಾಪಕಿ ಡಾ.ಪ್ರಮೀಳಾ ಮಾಧವ, ವಿಶ್ರಾಂತ ಪ್ರಾಧ್ಯಾಪಕ ಡಾ.ಕೆ.ಸುಬ್ರಹ್ಮಣ್ಯ ಭಟ್., ನಿವೃತ್ತ ಅಧ್ಯಾಪಕ ವಿಶಾಲಾಕ್ಷ ಪುತ್ರಕಳ ಗುರುವಂದನೆ ಸಲ್ಲಿಸಿ ಮಾತನಾಡಿದರು.
ಪ್ರೊ.ಪಿ.ಶ್ರೀಕೃಷ್ಣ ಭಟ್-ಹೇಮಾವತಿ ದಂಪತಿಗಳನ್ನು ಶಿಷ್ಯವೃಂದ, ಅಭಿಮಾನಿಗಳು ಹಾಗೂ ಸಹೃದಯರ ಸಮಕ್ಷಮ ಅಭಿನಂದಿಸಿ ಗೌರವಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರೊ.ಪಿ.ಶ್ರೀಕೃಷ್ಣ ಭಟ್ ಅವರು ನೂರಾರು ವಿದ್ಯಾರ್ಥಿಗಳಿಗೆ ಬೋಧನೆಗೈದ ಸಂತೃಪ್ತಿ, ಕನ್ನಡ ಭಾಷೆ, ವ್ಯಾಕರಣ, ಕಾವ್ಯಗಳ ಅಧ್ಯಯನಗಳು ಸಂತೃಪ್ತಿಯೊದಗಿಸಿದೆ. ಶಿಷ್ಯಂದಿರನೇಕರು ಇಂದು ವಿವಿಧ ಕ್ಷೇತ್ರಗಳಲ್ಲಿ ಮುಂಚುತ್ತಿರುವುದು ಹೆಮ್ಮೆತಂದಿದೆ ಎಂದರು.
ನೀರ್ಚಾಲು ಮಹಾಜನ ಸಂಸ್ಕøತ ಕಾಲೇಜು-ಹೈಯರ್ ಸೆಕೆಂಡರಿಯ ಪ್ರಭಾರ ಪ್ರಾಂಶುಪಾಲೆ ಜಯಲಕ್ಷಿ, ಫ್ರೌಢಶಾಲಾ ಮುಖ್ಯೋಪಾಧ್ಯಾಯ ಶಿವಪ್ರಕಾಶ್ ಕೆ.ಎಂ.ಉಪಸ್ಥಿತರಿದ್ದರು. ಅಭಿನಂದನಾ ಸಮಿತಿ ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಮುಳ್ಳೇರಿಯ ಸ್ವಾಗತಿಸಿ, ವಂದಿಸಿದರು.ಡಾ.ವರದರಾಜ ಚಂದ್ರಗಿರಿ ನಿರೂಪಿಸಿದರು.