ಮುಂಬೈ: ಭಾರತದಲ್ಲಿ ಡೆಂಗಿ ಪ್ರಕರಣಗಳಲ್ಲಿ ಹೆಚ್ಚಳ ಕಂಡುಬರುವುದಕ್ಖೂ ಹವಾಮಾನಕ್ಕೂ ಸಂಕೀರ್ಣವಾದ ನಂಟಿದೆ ಎಂದು ಪುಣೆ ಮೂಲದ ಭಾರತೀಯ ಉಷ್ಣವಲಯ ಹವಾಮಾನವಿಜ್ಞಾನ ಕೇಂದ್ರ (ಐಐಟಿಎಂ) ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ.
ಒಂದು ವಾರದ ಅವಧಿಯಲ್ಲಿ ಬೀಳುವ 15 ಸೆಂ.ಮೀ.ಗಿಂತಲೂ ಅಧಿಕ ಮಳೆಯಿಂದ ಡೆಂಗಿ ಹರಡುವ ಸೊಳ್ಳೆಗಳ ಮೊಟ್ಟೆಗಳು ಹಾಗೂ ಲಾರ್ವೆ ಕೊಚ್ಚಿ ಹೋಗುತ್ತವೆ. ಈ ವಿದ್ಯಮಾನವು ಡೆಂಗಿ ಪ್ರಮಾಣ ತಗ್ಗಿಸುತ್ತದೆ ಎಂದು ಇದೇ ಅಧ್ಯಯನ ಹೇಳುತ್ತದೆ.
ಐಐಟಿಎಂನ ಸೋಫಿಯಾ ಯಾಕೂಬ್ ಹಾಗೂ ರಾಕ್ಸಿ ಮ್ಯಾಥ್ಯೂ ಕಾಲ್ ಅವರು ಈ ಕುರಿತು ಅಧ್ಯಯನ ನಡೆಸಿದ್ದು, ವರದಿಯು 'ಸೈಂಟಿಫಿಕ್ ರಿಪೋರ್ಟ್ಸ್' ನಿಯತಕಾಲಿಕದಲ್ಲಿ ಪ್ರಕಟವಾಗಿದೆ.
ಮುಂಗಾರು (ಜೂನ್‌ನಿಂದ ಸೆಪ್ಟೆಂಬರ್) ಅವಧಿಯಲ್ಲಿ, 27 ಡಿಗ್ರಿ ಸೆಲ್ಸಿಯಸ್‌ಗಿಂತಲೂ ಅಧಿಕ ತಾಪಮಾನ, ಸಾಧಾರಣ ಹಾಗೂ ಎಲ್ಲೆಡೆಯೂ ಸಮಾನ ಪ್ರಮಾಣದಲ್ಲಿ ಬೀಳುವ ಮಳೆ, ಶೇ 60ರಿಂದ 78ರಷ್ಟು ತೇವಾಂಶ ಇದ್ದಲ್ಲಿ ಡೆಂಗಿ ಪ್ರಕರಣಗಳು ಮತ್ತು ಅವುಗಳಿಂದಾಗಿ ಸಂಭವಿಸುವ ಸಾವುಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತದೆ ಎಂದು ಅಧ್ಯಯನ ಹೇಳುತ್ತದೆ.
ತಾಪಮಾನ, ಮಳೆ ಪ್ರಮಾಣ ಹಾಗೂ ತೇವಾಂಶದಂತಹ ಅಂಶಗಳು ಪುಣೆಯಲ್ಲಿ ಡೆಂಗಿ ಪ್ರಸರಣಕ್ಕೆ ಹೇಗೆ ಕಾರಣವಾಗಬಲ್ಲವು ಎಂಬುದರ ಮೇಲೆಯೂ ಈ ಅಧ್ಯಯನ ಬೆಳಕು ಚೆಲ್ಲುತ್ತದೆ.
'ಹವಾಮಾನ ಬದಲಾವಣೆಯಿಂದಾಗಿ, ಜಗತ್ತಿನಲ್ಲಿ ಡೆಂಗಿ ಪ್ರಕರಣಗಳು ಹೆಚ್ಚುತ್ತಿವೆ. ವಿಶ್ವದಲ್ಲಿ ವರದಿಯಾಗುವ ಒಟ್ಟು ಪ್ರಕರಣಗಳ ಪೈಕಿ ಮೂರನೇ ಒಂದರಷ್ಟು ಪ್ರಕರಣಗಳು ಭಾರತದಲ್ಲಿ ಕಂಡುಬರುತ್ತಿವೆ' ಎಂಬ ಆಘಾತಕಾರಿ ಅಂಶವನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
'ಹವಾಮಾನ ಬದಲಾವಣೆ ತಡೆಗಟ್ಟಲು ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ 2030ರ ವೇಳೆಗೆ, ಡೆಂಗಿಯಿಂದಾಗಿ ಸಂಭವಿಸುವ ಮರಣ ಪ್ರಮಾಣ ಶೇ 13ರಷ್ಟು, 2050ರ ವೇಳೆಗೆ ಶೇ 23ರಿಂದ 40ರಷ್ಟು ಹೆಚ್ಚಾಗಲಿದೆ' ಎಂದೂ ಅಧ್ಯಯನ ವರದಿ ಹೇಳಿದೆ.
ಸೋಫಿಯಾ ಯಾಕೂಬ್ ಸಂಶೋಧಕಿ ಐಐಟಿಎಂ ಪುಣೆನಮ್ಮ ಅಧ್ಯಯನ ಮಾದರಿಯನ್ನು ಇತರ ಪ್ರದೇಶಗಳಿಗೂ ಅನ್ವಯಿಸಬಹುದು. ಡೆಂಗಿ ನಿಯಂತ್ರಣಕ್ಕೆ ಬೇಕಾದ ವಿಧಾನಗಳನ್ನು ಅಳವಡಿಸಿಕೊಳ್ಳಲು ಇದರಿಂದ ಸಾಧ್ಯವಾಗಲಿದೆ.