ನವದೆಹಲಿ: ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪದಗ್ರಹಣ ಸಾಮಾರಂಭಕ್ಕೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಭಾಗಿಯಾಗಲಿದ್ದಾರೆ.
ಇದೇ ತಿಂಗಳು (ಜನವರಿ) 20ರಂದು ನಡೆಯುವ ಸಮಾರಂಭದಲ್ಲಿ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಅವರು, ಟ್ರಂಪ್‌ಗೆ ಅಧಿಕಾರ ಹಸ್ತಾಂತರಿಸಲಿದ್ದಾರೆ.
ಜೈಶಂಕರ್ ಅವರು ವಾಷಿಂಗ್ಟನ್ ಭೇಟಿಯ ಸಂದರ್ಭದಲ್ಲಿ, ಟ್ರಂಪ್ ಆಡಳಿತದ ಪ್ರತಿನಿಧಿಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ಹೇಳಿಕೆ ಬಿಡುಗಡೆ ಮಾಡಿದೆ.
'ಅಮೆರಿಕದ ಆಹ್ವಾನದ ಮೇರೆಗೆ ಜೈಶಂಕರ್ ಅವರು ಡೊನಾಲ್ಡ್ ಟ್ರಂಪ್ ಅವರ ಪ್ರಮಾಣವಚನ ಸಮಾರಂಬದಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಅದೇ ವೇಳೆ, ಅಮೆರಿಕ ಆಡಳಿತದ ಪ್ರತಿನಿಧಿಗಳು, ಇತರ ರಾಷ್ಟ್ರಗಳ ಗಣ್ಯರೊಂದಿಗೆ ಸಭೆ ನಡೆಸಲಿದ್ದಾರೆ' ಎಂದು ಉಲ್ಲೇಖಿಸಿದೆ.
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸೇರಿದಂತೆ ವಿವಿಧ ದೇಶಗಳ ಮುಖ್ಯಸ್ಥರು, ಈ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.
ಟ್ರಂಟ್ ಅವರು ಮೊದಲ ಬಾರಿಗೆ ಅಮೆರಿಕದ ಅಧ್ಯಕ್ಷರಾಗಿದ್ದಾಗ, 2017ರ ಜನವರಿ 20ರಿಂದ 2021ರ ಜನವರಿ 20ರವರೆಗೆ ಅಧಿಕಾರದಲ್ಲಿದ್ದರು.