ನವದೆಹಲಿ: ರಾಷ್ಟ್ರದ ರಾಜಧಾನಿಯಲ್ಲಿ ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೊಳಿಸುವವರ ಸಂಖ್ಯೆ ಏಕಾಏಕಿ ಏರಿಕೆಯಾಗಿದ್ದು, ಎಎಪಿ ಸರ್ಕಾರದ 'ಮಹಿಳಾ ಸಮ್ಮಾನ್ ಯೋಜನೆ' ಇದಕ್ಕೆ ಕಾರಣ ಎಂದು ಮೂಲಗಳು ತಿಳಿಸಿವೆ.
ಪಕ್ಷವು ಮತ್ತೆ ಅಧಿಕಾರಕ್ಕೇರಿದರೆ ದೆಹಲಿಯ ನೋಂದಾಯಿತ ಮಹಿಳಾ ಮತದಾರರಿಗೆ ಮಾಸಿಕ ₹2,100 ನೆರವು ನೀಡುವುದಾಗಿ ಎಎಪಿ ಘೋಷಿಸಿದೆ.
ದೆಹಲಿ ವಿಧಾನಸಭೆಗೆ ಮುಂದಿನ ತಿಂಗಳು ಚುನಾವಣೆ ನಡೆಯಲಿದೆ.
ಮತದಾರರ ಪಟ್ಟಿ ಪರಿಷ್ಕರಣೆ ಅಭಿಯಾನದ ಅವಧಿಯಲ್ಲಿ 3 ಲಕ್ಷಕ್ಕೂ ಹೆಚ್ಚು ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ. ಹೊಸ ಮತದಾರರ ನೋಂದಣಿಗೆ ಡಿಸೆಂಬರ್ 16, 2024ರಿಂದ ಜನವರಿ 6, 2025ರವರೆಗೆ 5.1 ಲಕ್ಷ ಅರ್ಜಿಗಳನ್ನು ಸ್ವೀಕರಿಸಲಾಗಿದೆ ಎಂದು ದೆಹಲಿ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ತಿಳಿಸಿದ್ದಾರೆ.
ಚುನಾವಣಾ ಆಯೋಗದ ಮಾರ್ಗಸೂಚಿಗಳಿಗೆ ಅನುಸಾರವಾಗಿ ಪ್ರತಿಯೊಂದು ಅರ್ಜಿಯನ್ನೂ ಕೂಲಂಕಷವಾಗಿ ಪರಿಶೀಲಿಸುವಂತೆ ದೆಹಲಿ ಸಿಇಒ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
'ಮತದಾರರ ಗುರುತಿನ ಚೀಟಿ ಪಡೆಯಲು ಸುಳ್ಳು ಅಥವಾ ತಿರುಚಿದ ದಾಖಲೆಗಳನ್ನು ಸಲ್ಲಿಸಿದ್ದಕ್ಕಾಗಿ 24 ಜನರ ವಿರುದ್ಧ ಎಂಟು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ' ಎಂದು ಆಯೋಗದ ಪ್ರಕಟಣೆ ತಿಳಿಸಿದೆ.