ಪಣಜಿ: ತನ್ನ ಎಲ್ಲಾ ಇಲಾಖೆಗಳ ಮುಖ್ಯಸ್ಥರು ಪ್ರಧಾನಿ ನರೇಂದ್ರ ಮೋದಿಯವರ ಮಾಸಿಕ 'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮವನ್ನು ಕೇಳಬೇಕೆಂಬುದನ್ನು ಗೋವಾ ಬಿಜೆಪಿ ಸರ್ಕಾರವು ಕಡ್ಡಾಯಗೊಳಿಸಿದೆ.
ಗುರುವಾರ ಹೊರಿಡಿಸಿರುವ ಪ್ರಕಟಣೆಯಲ್ಲಿ 'ಎಲ್ಲಾ ಇಲಾಖೆಗಳ ಮುಖ್ಯಸ್ಥರು (ಎಚ್‌ಒಡಿ) 'ಮನ್ ಕಿ ಬಾತ್' ರೇಡಿಯೊ ಕಾರ್ಯಕ್ರಮವನ್ನು ಆಲಿಸಿ, ಸಲಹೆಗಳಿಂದ ಸ್ಫೂರ್ತಿ ಪಡೆಯಬೇಕು ಹಾಗೂ ಅವುಗಳನ್ನು ಉತ್ತಮವಾದವುಗಳನ್ನು ಕಾರ್ಯರೂಪಕ್ಕೆ ತರಬೇಕು' ಎಂದು ಹೇಳಿದೆ.
ಅಧೀನ ಕಾರ್ಯದರ್ಶಿ ಶ್ರೇಯಸ್ ಡಿಸಿಲ್ವಾ ಅವರು ಈ ಪ್ರಕಟಣೆಯನ್ನು ಹೊರಡಿಸಿದ್ದಾರೆ.
ಪ್ರಕಟಣೆಯನ್ನು ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್ 'ಆಡಳಿತದ ಕುರಿತು ಜನರ ಹೊಂದಿರುವ ಅಭಿಪ್ರಾಯಗಳನ್ನು, ಸಾಮಾಜಿಕ ಬದಲಾವಣೆಗೆ ಕಾರಣವಾಗುವ ವೈಯಕ್ತಿಕ ಹಾಗೂ ಸಾಮೂಹಿಕ ಪ್ರಯತ್ನಗಳ ಮೇಲೆ ಪ್ರಧಾನಿಯವರ ಈ ಕಾರ್ಯಕ್ರಮ ಬೆಳಕು ಚೆಲ್ಲುತ್ತದೆ' ಎಂದು ಬರೆದುಕೊಂಡಿದ್ದಾರೆ.