ಚಂಡೀಗಢ: 'ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಅಮರಣಾಂತ ಉಪವಾಸ ಕೈಗೊಂಡಿರುವ ರೈತ ಮುಖಂಡ ಜಗಜೀತ್ ಸಿಂಗ್ ಡಲ್ಲೇವಾಲ್ ಅವರನ್ನು ಕೇಂದ್ರ ಸರ್ಕಾರ ನಿರ್ಲಕ್ಷಿಸುತ್ತಿದ್ದು, ಪ್ರತಿಭಟನನಿರತ ರೈತರ ಜೊತೆಗೆ ಮಾತುಕತೆ ನಡೆಸಬೇಕು' ಎಂದು ಸಂಯುಕ್ತ ಕಿಸಾನ್ ಮೋರ್ಚಾ ಸಂಘಟನೆ (ಎಸ್‌ಕೆಎಂ) ಆಗ್ರಹಿಸಿದೆ.
ಪಂಜಾಬ್‌ನ ಮೊಗಾದಲ್ಲಿ ನಡೆದ 'ಕಿಸಾನ್ ಮಹಾಪಂಚಾಯತ್' ಬಳಿಕ ಮಾತನಾಡಿದ ಸಂಘಟನೆಯ ಮಖಂಡರು, 'ಕೃಷಿ ಮಾರುಕಟ್ಟೆ ರಾಷ್ಟ್ರೀಯ ಕರಡು ನೀತಿ'ಯನ್ನು (ಎನ್‌ಪಿಎಫ್‌ಎಎಂ) ಕೇಂದ್ರ ಸರ್ಕಾರ ಘೋಷಿಸಿದೆ. ಹಿಂದಕ್ಕೆ ಪಡೆದ ಕೃಷಿ ಮೂರು ಕಾಯ್ದೆಗಳನ್ನು ಮರು ಜಾರಿಗೆ ತರಲು ಅತ್ಯಂತ ಭಯಾನಕ ಮಾರ್ಗ ಅನುಸರಿಸಲಾಗುತ್ತಿದೆ' ಎಂದು ಕಿಡಿಕಾರಿದೆ.
'ಕರಡು ನೀತಿ'ಯ ಪ್ರತಿಗಳಿಗೆ ಜ.13ರಂದು ಬೆಂಕಿ ಹಚ್ಚಿ ಸುಡುವುದಾಗಿ ತಿಳಿಸಿದ್ದು, ಇದೇ 26ರಂದು ಟ್ರಾಕ್ಟರ್ ರ‍್ಯಾಲಿ ನಡೆಸಲಾಗುವುದು ಎಂದು ತಿಳಿಸಿದೆ.
ಎನ್‌ಪಿಎಂಎಂ ಕರಡು ನೀತಿ ಕುರಿತು ಆಕ್ರೋಶ ವ್ಯಕ್ತಪಡಿಸಿ, ಎಸ್‌ಕೆಎಂ ವಾರದ ಅಂತರದಲ್ಲಿಯೇ ಎರಡನೇ ಮಹಾ ಪಂಚಾಯತ್ ನಡೆಸಿದ್ದು, ಒಂದೊಮ್ಮೆ ಜಾರಿಯಾದರೆ, ಈಗಿರುವ 'ಕೃಷಿ ಮಂಡಿ' ವ್ಯವಸ್ಥೆಯೂ ಸಂಪೂರ್ಣವಾಗಿ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದೆ.
ಜ.4ರಂದು ಹರಿಯಾಣದ ತೊಹಾನಾದಲ್ಲಿ ಮೊದಲ ಮಹಾ ಪಂಚಾಯತ್ ನಡೆಸಿತ್ತು.