ಜೆರುಸಲೇಂ: ಕದನ ವಿರಾಮ ಮತ್ತು ಒತ್ತೆಯಾಳು ಬಿಡುಗಡೆ ಒಪ್ಪಂದವನ್ನು ಘೋಷಿಸಿದ ಕೆಲವೇ ಗಂಟೆಗಳ ನಂತರ ಗಾಜಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿಯನ್ನು ತೀವ್ರಗೊಳಿಸಿದೆ ಎಂದು ಪ್ಯಾಲೇಸ್ಟಿನ್ ಅಧಿಕಾರಿಗಳು ತಿಳಿಸಿದ್ದಾರೆ.
ಗಾಜಾದಲ್ಲಿ 15 ತಿಂಗಳ ಸಂಘರ್ಷದ ಬಳಿಕ ಇಸ್ರೇಲ್ ಮತ್ತು ಹಮಾಸ್ ಬಂಡುಕೋರರ ನಡುವಿನ ಯುದ್ಧ ವಿರಾಮ ಮತ್ತು ಒತ್ತೆಯಾಳುಗಳ ಬಿಡುಗಡೆ ಒಪ್ಪಂದವನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ಮತ್ತು ಕತಾರ್ ಪ್ರಧಾನಿ ಮತ್ತು ವಿದೇಶಾಂಗ ವ್ಯವಹಾರ ಸಚಿವ ಮೊಹಮ್ಮದ್ ಬಿನ್ ಅಬ್ದುಲ್‌ರಹಮನ್ ಬುಧವಾರ ಘೋಷಣೆ ಮಾಡಿದ್ದರು.
ಈ ಒಪ್ಪಂದವು ಆರು ವಾರಗಳ ಆರಂಭಿಕ ಕದನ ವಿರಾಮದ ರೂಪುರೇಷೆಗಳನ್ನು ಒಳಗೊಂಡಿದೆ. ಅದರಂತೆ ಗಾಜಾ ಪಟ್ಟಿಯಿಂದ ಇಸ್ರೇಲಿ ಪಡೆಗಳನ್ನು ಕ್ರಮೇಣ ಹಿಂತೆಗೆದುಕೊಳ್ಳುವುದು ಸೇರಿದಂತೆ ಇಸ್ರೇಲ್ ವಶದಲ್ಲಿರುವ ಪ್ಯಾಲೇಸ್ಟಿನ್ ಕೈದಿಗಳಿಗೆ ಬದಲಾಗಿ ಹಮಾಸ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವಂತೆ ಉಲ್ಲೇಖಿಸಲಾಗಿದೆ.
ದೋಹಾದಲ್ಲಿ ಸುದ್ದಿಗೋಷ್ಠಿಯಲ್ಲಿ ಕತಾರ್ ಪ್ರಧಾನಿ ಮಾತನಾಡಿ, 'ಕದನ ವಿರಾಮ ಭಾನುವಾರದಿಂದ ಜಾರಿಗೆ ಬರಲಿದೆ. ಸಂಧಾನಕಾರರು ಇಸ್ರೇಲ್ ಮತ್ತು ಹಮಾಸ್ ಜೊತೆ ಒಪ್ಪಂದವನ್ನು ಜಾರಿಗೆ ತರಲು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ' ಎಂದು ಹೇಳಿದ್ದರು.
'ಈ ಒಪ್ಪಂದವು ಗಾಜಾದಲ್ಲಿನ ಯುದ್ಧವನ್ನು ನಿಲ್ಲಿಸುತ್ತದೆ. ಪ್ಯಾಲೆಸ್ಟೇನ್ ನಾಗರಿಕರಿಗೆ ಮಾನವೀಯ ನೆರವು ಒದಗಿಸುತ್ತದೆ. 15 ತಿಂಗಳುಗಳಿಗಿಂತ ಹೆಚ್ಚು ಕಾಲ ಸೆರೆಯಲ್ಲಿದ್ದ ಒತ್ತೆಯಾಳುಗಳನ್ನು ಅವರ ಕುಟುಂಬಗಳೊಂದಿಗೆ ಸೇರಿಸುತ್ತದೆ' ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಹೇಳಿದ್ದರು.