ಕುಂಬಳೆ: ಜೀರ್ಣೋದ್ಧಾರಗೊಳ್ಳುತ್ತಿರುವ ಪೆರ್ಮುದೆ ಸಮೀಪದ ಕಂಬಾರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮಂಡಳಿಯವರ ಮನವಿಯನ್ನು ಪುರಸ್ಕರಿಸಿ, ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಭಾನುವಾರ 500000 (ಐದು ಲಕ್ಷ ರೂ.) ಸಹಾಯಧನ ನೀಡಿ ಶುಭ ಹಾರೈಸಿದರು. ಶ್ರೀಮಂಜುನಾಥನ ಅನುಗ್ರಹದಿಂದ ಕೈಗೊಂಡ ಎಲ್ಲಾ ಕೆಲಸಗಳೂ ನಿರ್ವಿಘ್ನವಾಗಿ ನಡೆಯಲಿ. ಜನವರಿ 28 ರಿಂದ ಆರಂಭವಾಗುವ ಬ್ರಹ್ಮಕಲಶೋತ್ಸವ ನಿರಾತಂಕವಾಗಿ ನಡೆದು ಕುಡಾಲು ಬಾಡೂರು ಗ್ರಾಮಗಳ ಹಾಗೂ ಸಮಸ್ತ ಭಕ್ತಜನತೆಗೆ ಶ್ರೇಯಸ್ಸಾಗಲಿ ಎಂದು ಹಾರೈಸಿದರು.
ಈ ಸಂದರ್ಭ ಮೊಕ್ತೇಸರ ನೆರಿಯ ಹೆಗಡೆ ಲಕ್ಷ್ಮೀನಾರಾಯಣ ಭಟ್, ಕುಡಾಲುಗುತ್ತು ದಿವಾಕರ ಶೆಟ್ಟಿ, ಬ್ರಹ್ಮಕಲಶೋತ್ಸವ ಸಮಿತಿ ಸದಸ್ಯರಾದ ಕೇಶವಪ್ರಸಾದ ಎಡಕ್ಕಾನ, ರಾಜಾರಾಮ ಶೆಟ್ಟಿ ಕುಡಾಲು, ಸುದೇಶ್ ಕುಡಾಲು, ಖಾವಂದರ ಕಛೇರಿ ಸಹಾಯಕ ಮಹಾವೀರ ಉಪಸ್ಥಿತರಿದ್ದರು.