ನವದೆಹಲಿ: ಮದ್ಯ ಮಾರಾಟ ಸಂಸ್ಥೆಯೊಂದಕ್ಕೆ ವಿಸ್ಕಿಯನ್ನು ತೆರಿಗೆ ರಹಿತವಾಗಿ ಮಾರಾಟ ಮಾಡಲು ಅನುವು ಮಾಡಿಕೊಟ್ಟ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿ ಚಿದಂಬರಂ ಅವರನ್ನು ಬಂಧಿಸುವ ಅಗತ್ಯವಿದ್ದರೆ 3 ದಿನಗಳ ಮುನ್ನ ಬಂಧನಪೂರ್ವ ನೋಟಿಸ್ ನೀಡಬೇಕು ಎಂದು ದೆಹಲಿ ಕೋರ್ಟ್ ಸಿಬಿಐಗೆ ನಿರ್ದೇಶನ ನೀಡಿದೆ.
ತನಿಖಾ ಸಂಸ್ಥೆಗೆ ಅಗತ್ಯವಿದ್ದಾಗ ವಿಚಾರಣೆಗೆ ಹಾಜರಾಗಿ, ತನಿಖೆಗೆ ಸಹಕರಿಸುವಂತೆ ಕಾರ್ತಿ ಚಿದಂಬರಂಗೆ ನಿರ್ದೇಶನ ನೀಡಿದ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಕಾವೇರಿ ಬವೇಜಾ ಈ ಆದೇಶ ನೀಡಿದ್ದಾರೆ.
ಪ್ರಕರಣ ಸಂಬಂಧ ಕಾರ್ತಿ ಚಿದಂಬರಂ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಿಚಾರಣೆ ನಡೆಸುತ್ತಿದೆ.
'ಜನವರಿ 12ರಂದು ಕಾರ್ತಿ ಚಿದಂಬರಂ ವಿದೇಶದಿಂದ ಅರ್ಜಿದಾರರು ವಿದೇಶದಿಂದ ಹಿಂದಿರುಗಿದ ಬಳಿಕ ವಿಚಾರಣೆಗೆ ಹಾಜರಾಗಬೇಕು ಮತ್ತು ತನಿಖಾ ಪ್ರಕ್ರಿಯೆಯಲ್ಲಿ ಸಹಕರಿಸಬೇಕು. ವಿಚಾರಣೆಗೆ ಹಾಜರಾದ ನಂತರ ಅವರ ಬಂಧನದ ಅಗತ್ಯವಿದ್ದಲ್ಲಿ ತನಿಖಾ ಸಂಸ್ಥೆಯು ಮೂರು ದಿನಗಳ ಮೊದಲು ಲಿಖಿತ ನೋಟಿಸ್ ನೀಡಬೇಕು 'ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಡಿಯಾಜಿಯೊ ಸ್ಕಾಟ್‌ಲ್ಯಾಂಡ್ ವಿಸ್ಕಿಯನ್ನು ಸುಂಕ ರಹಿತವಾಗಿ ಮಾರಾಟ ಮಾಡದಂತೆ ಐಟಿಡಿಸಿ (ಇಂಡಿಯಾ ಟೂರಿಸಂ ಡೆವಲಪ್‌ಮೆಂಟ್ ಕಾರ್ಪೊರೇಷನ್) ವಿಧಿಸಿದ್ದ ನಿಷೇಧವನ್ನು ತೆರವು ಮಾಡಲು ಅನುವು ಮಾಡಿಕೊಟ್ಟು ಭ್ರಷ್ಟಾಚಾರ ಎಸಗಿದ ಆರೋಪದಡಿ ಕಾರ್ತಿ ಚಿದಂಬರಂ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಪ್ರಕರಣವು ಅಡ್ವಾಂಟೇಜ್ ಸ್ಟ್ರಾಟೆಜಿಕ್ ಕನ್ಸಲ್ಟಿಂಗ್ ಪ್ರೈವೇಟ್ ಲಿಮಿಟೆಡ್‌ಗೆ(ಎಎಸ್‌ಪಿಎಲ್) ಸಂದೇಹಾಸ್ಪದ ಹಣದ ಪಾವತಿಗೆ ಸಂಬಂಧಿಸಿದೆ. ಕಾರ್ತಿ ಮತ್ತು ಅವರ ಆಪ್ತ ಸಹಾಯಕ ಎಸ್ ಭಾಸ್ಕರರಾಮನ್ ಅವರ ನಿಯಂತ್ರಣದಲ್ಲಿರುವ ಈ ಸಂಸ್ಥೆಗೆ ಡಿಯಾಜಿಯೊ ಸ್ಕಾಟ್‌ಲ್ಯಾಂಡ್ ಮತ್ತು ಸಿಕ್ವೊಯಾ ಕ್ಯಾಪಿಟಲ್ಸ್‌ನಿಂದ ಲಂಚದ ಹಣ ಪಾವತಿಯಾಗಿದೆ ಎಂದು ಎಫ್‌ಐಆರ್‌ನಲ್ಲಿ ಆರೋಪಿಸಲಾಗಿದೆ.
2018ರಿಂದ ಕಾರ್ತಿ ಚಿದಂಬರಂ ವಿರುದ್ಧ ಸಬಿಐ ದಾಖಲಿಸಿದ 4ನೇ ಪ್ರಕರಣ ಇದಾಗಿದೆ.