ನವದೆಹಲಿ: 'ಇನ್ನೆರಡು ತಿಂಗಳೊಳಗೆ ಪೆಟ್ರೋಲ್‌ನೊಂದಿಗೆ ಶೇ. 20ರಷ್ಟು ಎಥೆನಾಲ್ ಮಿಶ್ರಣ ಮಾಡುವ ಗುರಿ ಸಾಧಿಸಲಾಗುವುದು' ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
2023ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪೆಟ್ರೋಲ್‌ನೊಂದಿಗೆ ಶೇ 20ರಷ್ಟು ಎಥೆನಾಲ್ ಮಿಶ್ರಣ ಯೋಜನೆಗೆ ಚಾಲನೆ ನೀಡಿದ್ದರು. ಮೊದಲ ಹಂತದಲ್ಲಿ ದೇಶದ 15 ನಗರಗಳಲ್ಲಿ ಈ ಯೋಜನೆ ಅನುಷ್ಠಾನಗೊಂಡಿದೆ.
ಕಾರ್ಯಕ್ರಮವೊಂದರಲ್ಲಿ ಬುಧವಾರ ಮಾತನಾಡಿದ ಗಡ್ಕರಿ, 'ಪೆಟ್ರೋಲ್‌ನೊಂದಿಗೆ ಎಥೆನಾಲ್ ಮಿಶ್ರಣವು ವಾಯುಮಾಲಿನ್ಯ ತಡೆಗಟ್ಟಲು ನೆರವಾಗಲಿದೆ' ಎಂದರು.
ಟಾಟಾ ಮೋಟರ್ಸ್, ಮಹೀಂದ್ರ ಆಯಂಡ್ ಮಹೀಂದ್ರ, ಮಾರುತಿ ಸುಜುಕಿ, ಹುಂಡೈ ಮೋಟರ್ಸ್ ಈಗಾಗಲೇ ಶೇ 100ರಷ್ಟು ಜೈವಿಕ ಎಥೆನಾಲ್ ಬಳಸಿ ಸಂಚರಿಸುವ ವಾಹನಗಳ ತಯಾರಿಕೆಯಲ್ಲಿ ತೊಡಗಿವೆ ಎಂದು ತಿಳಿಸಿದರು.
ದೇಶದಲ್ಲಿ ವಾಯುಮಾಲಿನ್ಯವು ಅತಿದೊಡ್ಡ ಸಮಸ್ಯೆಯಾಗಿದೆ. ವಿಶ್ವದಲ್ಲಿ ಅತಿಹೆಚ್ಚು ಮಾಲಿನ್ಯ ಹೊಂದಿರುವ 50 ನಗರಗಳ ಪಟ್ಟಿಯಲ್ಲಿ ಭಾರತದ 42 ನಗರಗಳು ಸೇರಿವೆ ಎಂದರು.
ಭಾರತವು ₹22 ಲಕ್ಷ ಕೋಟಿ ಮೌಲ್ಯದ ಪಳೆಯುಳಿಕೆ ಇಂಧನವನ್ನು ಆಮದು ಮಾಡಿಕೊಳ್ಳುತ್ತಿದ್ದು, ಇದು ಮಾಲಿನ್ಯ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.