ಢಾಕಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಅವಾಮಿ ಲೀಗ್ ಪಕ್ಷವನ್ನು ಸರ್ಕಾರ ಮತ್ತು ನ್ಯಾಯಾಲಯ ನಿಷೇಧಿಸದಿದ್ದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಮುಖ್ಯ ಚುನಾವಣಾ ಆಯುಕ್ತ ಎ.ಎಮ್.ಎಮ್. ನಾಸೀರ್ ಉದ್ದೀನ್ ಅವರು ಹೇಳಿದ್ದಾರೆ.
ಚಿತ್ತಗಾಂಗ್ ಸರ್ಕ್ಯೂಟ್ ಹೌಸ್‌ನಲ್ಲಿ ಸೋಮವಾರ ನಡೆದ ಚುನಾವಣಾ ಅಧಿಕಾರಿಗಳೊಂದಿನ ಸಭೆಯಲ್ಲಿ ಮಾತನಾಡಿದ ನಾಸೀರ್ ಉದ್ದೀನ್ ಅವರು, 'ಸ್ವತಂತ್ರವಾಗಿ ಮತ್ತು ಯಾವುದೇ ಒತ್ತಡವಿಲ್ಲದೆ ಚುನಾವಣೆ ನಡೆಸುತ್ತೇವೆ' ಎಂದು ಹೇಳಿದ್ದಾರೆ ಎಂದು ಢಾಕಾ ಟ್ರಿಬ್ಯುನ್ ದಿನಪತ್ರಿಕೆ ವರದಿ ಮಾಡಿದೆ.
'ಹಿಂದಿನ ಚುನಾವಣೆಯಲ್ಲಿ ನಕಲಿ ಮತದಾರರು ಮತಚಲಾಯಿಸಿದ್ದಾರೆ. ಚುನಾವಣಾ ಪ್ರಕ್ರಿಯೆ ಮೇಲಿನ ಅಪನಂಬಿಕೆಯೇ ಮತದಾರರ ನೋಂದಣಿ ಕುಸಿತಕ್ಕೆ ಕಾರಣ. ಈ ಬಾರಿ ಹಿಂದಿನಂತೆ ಚುನಾವಣೆ ನಡೆಯುವುದಿಲ್ಲ' ಎಂದು ಹೇಳಿದ್ದಾರೆ
'2025ರ ಅಂತ್ಯ ಮತ್ತು 2026ರ ಮೊದಲ ಆರು ತಿಂಗಳ ಅವಧಿಯಲ್ಲಿ ಬಾಂಗ್ಲಾದೇಶದಲ್ಲಿ ಚುನಾವಣೆ ನಡೆಯಬಹುದು' ಎಂದು ಮಧ್ಯಂತರ ಸರ್ಕಾರದ ಸಲಹೆಗಾರ ಮೊಹಮ್ಮದ್ ಯೂನುಸ್ ಅವರು ಇತ್ತೀಚೆಗೆ ಹೇಳಿದ್ದರು.