ನವದೆಹಲಿ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಪುನರ್‌ರಚಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯನ್ನು 2025-26ರವರೆಗೆ ಮುಂದುವರಿಸಲು ಕೇಂದ್ರ ಸಚಿವ ಸಂಪುಟ ಬುಧವಾರ ಅನುಮೋದನೆ ನೀಡಿದೆ. ಈ ಪ್ರಮುಖ ಯೋಜನೆಗಳ ಅನುಷ್ಠಾನದ ವೇಳೆ ತಂತ್ರಜ್ಞಾನದ ಅಳವಡಿಕೆಗಾಗಿ ಪ್ರತ್ಯೇಕವಾಗಿ ₹824.77 ಕೋಟಿ ನಿಧಿಯನ್ನೂ ರಚಿಸಲಾಗಿದೆ.
'2020-21ರಿಂದ 2024-25ರವರೆಗೆ ಈ ಯೋಜನೆಗಳ ಒಟ್ಟು ವೆಚ್ಚ ₹66,550 ಕೋಟಿ ಆಗಿತ್ತು. ಈ ವಿಮೆಗಳ ಕುರಿತು ರೈತರಿಂದ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ, ಈ ಯೋಜನೆಗಳನ್ನು 15ನೇ ಹಣಕಾಸು ಆಯೋಗದ ಅವಧಿ ಮುಗಿಯುವ ವರೆಗೆ ಮುಂದುವರಿಸಲಾಗುತ್ತದೆ. ಯೋಜನೆಗಳ ಒಟ್ಟು ಮೊತ್ತವನ್ನು ₹69,550 ಕೋಟಿಗೆ ಹೆಚ್ಚಿಸಲಾಗಿದೆ. ಈ ನಿರ್ಧಾರದಿಂದ ನೈಸರ್ಗಿಕ ವಿಕೋಪಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಲು ರೈತರಿಗೆ ಅನುಕೂಲವಾಗಲಿದೆ' ಎಂದು ಮಾಹಿತಿ ಹಾಗೂ ಪ್ರಸಾರ ಸಚಿವ ಅಶ್ವಿನಿ ವೈಷ್ಣವ್ ಸುದ್ದಿಗಾರರಿಗೆ ತಿಳಿಸಿದರು.
ಆವಿಷ್ಕಾರ ಹಾಗೂ ತಂತ್ರಜ್ಞಾನದ ನಿಧಿಯಿಂದ ಪಾರದರ್ಶಕತೆ ಹೆಚ್ಚಲಿದೆ. ತಾಂತ್ರಿಕ ಉಪಕ್ರಮಗಳಿಗೆ, ಸಂಶೋಧನಾ ಚಟುವಟಿಕೆಗಳಿಗೆ ಈ ನಿಧಿಯನ್ನು ಬಳಸಲಾಗುತ್ತದೆ. ಬೆಳೆ ಹಾನಿ, ಕ್ಲೈಮ್ ಇತ್ಯರ್ಥ ಮತ್ತು ವಿವಾದಗಳನ್ನು ತ್ವರಿತವಾಗಿ ಬಗೆಹರಿಸಲು ತಂತ್ರಜ್ಞಾನದ ಬಳಕೆಗೆ ಸಹಾಯವಾಗಲಿದೆ. ಕೃಷಿ ಸಚಿವಾಲಯವು ಈ ನಿಧಿಯನ್ನು ತಂತ್ರಜ್ಞಾನ ಆಧಾರಿತ ಇಳುವರಿ ಅಂದಾಜು ವ್ಯವಸ್ಥೆ (ಯೆಸ್-ಟೆಕ್), ಹವಾಮಾನ ಮಾಹಿತಿ ಮತ್ತು ಜಾಲ ದತ್ತಾಂಶ ವ್ಯವಸ್ಥೆ (ವಿಂಡ್ಸ್), ಸಂಶೋಧನೆ ಚಟುವಟಿಕೆಗಳಿಗೆ ಧನಸಹಾಯಕ್ಕಾಗಿ ಬಳಸಲಿದೆ.
ತಂತ್ರಜ್ಞಾನ ಆಧಾರಿತ ಆದಾಯ ಮುನ್ಸೂಚನೆ ವ್ಯವಸ್ಥೆಯಡಿ ರಿಮೋಟ್ ಸೆನ್ಸಿಂಗ್ ತಂತ್ರಜ್ಞಾನ ಬಳಸಿಕೊಂಡು ಇಳುವರಿ ಅಂದಾಜು ಮಾಡಲಾಗುತ್ತದೆ. ಕರ್ನಾಟಕ ಸೇರಿದಂತೆ ಒಂಬತ್ತು ಪ್ರಮುಖ ರಾಜ್ಯಗಳು ಈ ತಂತ್ರಜ್ಞಾನ ಅಳವಡಿಸಿಕೊಂಡಿವೆ. ಇತರ ರಾಜ್ಯಗಳಲ್ಲಿ ತಂತ್ರಜ್ಞಾನ ಅಳವಡಿಕೆ ಆರಂಭವಾಗಿದೆ ಎಂದು ಸಚಿವರು ತಿಳಿಸಿದರು.
ವಿಂಡ್ಸ್ ಅಡಿಯಲ್ಲಿ ಬ್ಲಾಕ್ ಮಟ್ಟದಲ್ಲಿ ಸ್ವಯಂಚಾಲಿತ ಹವಾಮಾನ ಕೇಂದ್ರಗಳನ್ನು ಮತ್ತು ಪಂಚಾಯಿತಿ ಮಟ್ಟದಲ್ಲಿ ಸ್ವಯಂಚಾಲಿತ ಮಳೆ ಮಾಪಕಗಳನ್ನು ಸ್ಥಾಪಿಸುವ ಆಲೋಚನೆ ಇದೆ ಎಂದರು.