ಕಾಸರಗೋಡು: ನೌಕರರ ವೈಯುಕ್ತಿಕ ಹಕ್ಕುಗಳನ್ನು ಕಸಿದುಕೊಳ್ಳುವ ಸರ್ಕಾರದ ಧೋರಣೆ ಬದಲಾಯಿಸಿ ಅವರ ಹಿತ ಕಾಪಾಡಲು ಮುಂದಗಬೇಕು ಎಂದು ಡಿಸಿಸಿ ಅಧ್ಯಕ್ಷ ಪಿ.ಕೆ.ಫೈಸಲ್ ತಿಳಿಸಿದರು. ಅವರು ಅನುದಾನಿತ ಹೈಯರ್ ಸೆಕೆಂಡರಿ ಶಾಲಾ ಶಿಕ್ಷಕರ ಸಂಘ(ಎಎಚ್‍ಎಸ್‍ಟಿಎ)ದ 34ನೇ ಜಿಲ್ಲಾ ಸಮ್ಮೇಳನ ಕಾಸರಗೋಡಿನಲ್ಲಿ ಉದ್ಘಾಟಿಸಿ ಮಾತನಾಡಿದರು.
ವಿಕಲಚೇತನರ ನೇಮಕಾತಿ ಕಾಯ್ದೆಯನ್ವಯ ಹೈಯರ್ ಸೆಕೆಂಡರಿ ವಲಯದಲ್ಲಿ ನಡೆಸಬೇಕಾದ ನೇಮಕಾತಿ ಪ್ರಕ್ರಿಯೆಯನ್ನು ಕಳೆದ ಮೂರು ವರ್ಷಗಳಿಂದ ನಿಷೇಧಿಸುತ್ತಾ ಬಂದಿರುವ ಸರ್ಕಾರ ಈ ಸಮುದಾಯಕ್ಕೆ ಅನ್ಯಾಯವೆಸಗಿದೆ.
ಕೋಟ್ಯಂತರ ರೂ. ಪಿಂಚಣಿ ಮೊತ್ತ ಬಾಕಿಯಿರಿಸಿಕೊಂಡಿರುವ ಸರ್ಕಾರ, ನೌಕರರ ಕೆಲವೊಂದು ಹಕ್ಕುಗಳನ್ನು ಕಸಿದುಕೊಳ್ಳುತ್ತಿದೆ ಅಲ್ಲದೆ, ಮೆಡಿಸೆಪ್ ಯೋಜನೆಯಲ್ಲಿ ಭ್ರಷ್ಟಾಚಾರದ ಕೂಗು ಕೇಳಿಬರುತ್ತಿರುವುದಾಗಿ ತಿಳಿಸಿದರು. ಎಎಚ್‍ಎಸ್‍ಟಿಎ ಜಿಲ್ಲಾಧ್ಯಕ್ಷ ಪ್ರವೀಣ್‍ಕುಮಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾ ಕಾರ್ಯದರ್ಶಿ ಜಿ.ಜಿ.ಥಾಮಸ್ ಮುಖ್ಯ ಭಾಷಣ ಮಾಡಿದರು. ಸಭೆಯಲ್ಲಿ 10ನೇ ಮತ್ತು ಪ್ಲಸ್‍ಟು ತರಗತಿಯಲ್ಲಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ ಅಂಕ ಪಡೆದ ಸಂಘಟನೆ ಕಾರ್ಯಕರ್ತರ ಮಕ್ಕಳನ್ನು ಸನ್ಮಾನಿಸಲಾಯಿತು. ಕುಞÂಕೃಷ್ಣನ್ ಗುರು ಶ್ರೇಷ್ಠ ಪುರಸ್ಕಾರಕ್ಕೆ ಅಗಲ್ಪಾಡಿ ಶಾಲಾ ಶಿಕ್ಷಕ ಈಶ್ವರನ್ ನಂಬೂದಿರಿ ಅವರನ್ನು ಆಯ್ಕೆ ಮಾಡಲಾಯಿತು.
ಜಿಲ್ಲಾ ಕಾರ್ಯದರ್ಶಿ ಶಿನೋಜ್ ಸೆಬಾಸ್ಟಿಯನ್ ಸ್ವಾಗತಿಸಿದರು. ಕೋಶಾಧಿಕಾರಿ ಬಾಲಚಂದ್ರನ್ ವಂದಿಸಿದರು. ಸಂಘಟನೆಯ 2025-26ನೇ ಸಾಲಿನ ಅಧ್ಯಕ್ಷರಾಗಿ ಅನ್ವರ್ ಎಬಿ, ಕಾರ್ಯದರ್ಶಿಯಾಗಿ ಪ್ರವೀಣ್ ಕುಮಾರ್, ಕೋಶಾಧಿಕಾರಿಯಾಗಿ ರಂಜಾದ್ ಅಬ್ದುಲ್ಲಾ ಅವರನ್ನು ಆಯ್ಕೆ ಮಾಡಲಾಯಿತು.