ಸಿಂಗಪುರ: ಸಿಂಗಪುರದಲ್ಲಿ ವಾಸಿಸಲು ಹಾಗೂ ಉದ್ಯೋಗ ಪಡೆಯುವುದಕ್ಕಾಗಿ ವಿದೇಶಿ ಮಹಿಳೆಯರು ಇಲ್ಲಿನ ಪುರುಷರೊಂದಿಗೆ ಮಾಡಿಕೊಳ್ಳುತ್ತಿರುವ 'ಸುಳ್ಳು ವಿವಾಹ'/'ಮೋಸದ ಮದುವೆ' ಅಥವಾ 'ಅನುಕೂಲಕರ ಮದುವೆ' ಬಗ್ಗೆ ಅಧಿಕಾರಿಗಳು ಕಳವಳ ವ್ಯಕ್ತಪಡಿಸಿದ್ದಾರೆ.
ಬಹುತೇಕ ಸಂದರ್ಭಗಳಲ್ಲಿ ಒಂದು ಗುಂಪು ಈ ರೀತಿಯ 'ಮದುವೆ'ಗಳನ್ನು ನೆರವೇರಿಸುವಲ್ಲಿ ಸಕ್ರಿಯವಾಗಿರುವುದು ಕಂಡುಬಂದಿದೆ.
'2023ರ ಜನವರಿಯಿಂದ ಸೆಪ್ಟೆಂಬರ್ ವರೆಗಿನ ಅವಧಿಯಲ್ಲಿ ಇಂತಹ ನಾಲ್ಕು ಮದುವೆಗಳು ವರದಿಯಾಗಿದ್ದವು. 2024ರ ಇದೇ ಅವಧಿಯಲ್ಲಿ ಇಂತಹ ಮದುವೆಗಳ ಸಂಖ್ಯೆ 32ಕ್ಕೆ ಏರಿಕೆಯಾಗಿದೆ' ಎಂದು ಐಸಿಎ ಹೇಳಿದೆ.
ತಮ್ಮೊಂದಿಗೆ 'ಸುಳ್ಳು ಮದುವೆ' ಮಾಡಿಕೊಳ್ಳುವ ಸಿಂಗಪುರದ ಪುರುಷರಿಗೆ ವಿದೇಶಿ ಮಹಿಳೆಯರು ಸಾಕಷ್ಟು ಹಣ ನೀಡುತ್ತಾರೆ. ಇಂತಹ ಪ್ರಕರಣಗಳ ಕುರಿತು ತನಿಖೆ ನಡೆಸಿದ ನಂತರ, ಕೆಲವರನ್ನು ಬಂಧಿಸಲಾಗಿದೆ ಎಂಬ ಐಸಿಎ ಹೇಳಿಕೆ ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
'ಸಿಂಗಪುರದಲ್ಲಿ ವಿವಿಧ ಜನಾಂಗದ ಜನರು ವಾಸಿಸುತ್ತಿದ್ದು, ಇಂತಹ ಕಾನೂನುಬಾಹಿರ ಚಟುವಟಿಕೆಗಳು ಹೆಚ್ಚುತ್ತಿರುವುದು ವಿವಿಧ ಸಾಮಾಜಿಕ ಸಮಸ್ಯೆಗಳಿಗೆ ಕಾರಣವಾಗುತ್ತಿವೆ. ಇದು ಆತಂಕಕಾರಿ' ಎಂದು ಐಸಿಎ ಗುಪ್ತಚರ ವಿಭಾಗದ ಹಿರಿಯ ಅಧಿಕಾರಿ ಮಾರ್ಕ್ ಚಾಯ್ ಹೇಳುತ್ತಾರೆ.