ನವದೆಹಲಿ: ಜಿಎಸ್‌ಟಿ ವಂಚಿಸಿರುವ ಸಂಬಂಧ ₹1 ಲಕ್ಷ ಕೋಟಿಗೂ ಹೆಚ್ಚು ಹಣ ಪಾವತಿಸುವಂತೆ ಆನ್‌ಲೈನ್ ಗೇಮಿಂಗ್ ಕಂಪನಿಗಳು ಮತ್ತು ಕ್ಯಾಸಿನೊಗಳಿಗೆ ಜಾರಿ ಮಾಡಿರುವ ಶೋಕಾಸ್ ನೋಟಿಸ್‌ಗೆ ಸುಪ್ರೀಂ ಕೋರ್ಟ್ ಶುಕ್ರವಾರ ತಡೆ ನೀಡಿದೆ. ನ್ಯಾಯಮೂರ್ತಿಗಳಾದ ಜೆ.ಬಿ. ಪಾರ್ದೀವಾಲಾ ಮತ್ತು ಆರ್. ಮಹದೇವನ್ ಅವರಿದ್ದ ಪೀಠವು, ಗೇಮಿಂಗ್ ಕಂಪನಿಗಳ ವಿರುದ್ಧದ ಜಿಎಸ್‌ಟಿಯ ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡಿ, ವಿಚಾರಣೆಯನ್ನು ಮಾರ್ಚ್ 18ಕ್ಕೆ ಮುಂದೂಡಿತು.
ಆನ್‌ಲೈನ್ ಗೇಮಿಂಗ್ ಕಂಪನಿಗಳಿಗೆ 2023ರ ಅಕ್ಟೋಬರ್‌ನಲ್ಲಿ ಜಿಎಸ್‌ಟಿ ಅಧಿಕಾರಿಗಳು ಶೋಕಾಸ್ ನೋಟಿಸ್‌ಗಳನ್ನು ನೀಡಿದ್ದಾರೆ. ಕೆಲವು ಶೋಕಾಸ್ ನೋಟಿಸ್‌ಗಳ ಅವಧಿಯು ಫೆಬ್ರುವರಿಯಲ್ಲಿ ಅಂತ್ಯಗೊಳ್ಳಲಿದೆ ಎಂದು ಜಿಎಸ್‌ಟಿ ಇಲಾಖೆಯನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್. ವೆಂಕಟರಾಮನ್ ಅವರು ಪೀಠಕ್ಕೆ ತಿಳಿಸಿದರು.
ಗೇಮ್ಸ್ 24x7, ಹೆಡ್ ಡಿಜಿಟಲ್ ವರ್ಕ್ಸ್, ಫೆಡರೇಷನ್ ಆಫ್ ಇಂಡಿಯನ್ ಫ್ಯಾಂಟಸಿ ಸ್ಪೋರ್ಟ್ಸ್‌ನಂತಹ ಅನೇಕ ಆನ್‌ಲೈನ್ ಗೇಮಿಂಗ್ ಕಂಪನಿಗಳು ಜಿಎಸ್‌ಟಿ ಹೇರಿಕೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿವೆ.
₹21,000 ಕೋಟಿ ತೆರಿಗೆ ಪಾವತಿಸುವಂತೆ ಆನ್‌ಲೈನ್ ಗೇಮಿಂಗ್ ಕಂಪನಿಯೊಂದಕ್ಕೆ ಜಿಎಸ್‌ಟಿ ಇಲಾಖೆ ನೀಡಿರುವ ಸೂಚನೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿ ನೀಡಿರುವ ತೀರ್ಪಿಗೂ ಸುಪ್ರೀಂ ಕೋರ್ಟ್ ತಡೆ ನೀಡಿದೆ.
ಸರ್ಕಾರವು ಜಿಎಸ್‌ಟಿ ಕಾನೂನನ್ನು ತಿದ್ದುಪಡಿ ಮಾಡಿದ್ದು, ವಿದೇಶಿ ಆನ್‌ಲೈನ್ ಗೇಮಿಂಗ್ ಕಂಪನಿಗಳು ಭಾರತದಲ್ಲಿ ನೋಂದಣಿ ಮಾಡಿಕೊಳ್ಳುವುದನ್ನು 2023ರ ಅಕ್ಟೋಬರ್ 1ರಿಂದ ಕಡ್ಡಾಯಗೊಳಿಸಿದೆ.