ಲಂಡನ್ : ಬ್ರಿಟನ್ ಸರ್ಕಾರ ಸಿದ್ಧಪಡಿಸಿರುವ 'ಉಗ್ರವಾದ ಪರಾಮರ್ಶೆ' ಎಂಬ ವರದಿಯು ಸೋರಿಕೆಯಾಗಿದ್ದು, ಭಾರತದಲ್ಲಿ 'ಖಾಲಿಸ್ತಾನ ಪರ' ಹಾಗೂ 'ಹಿಂದೂ ರಾಷ್ಟ್ರೀಯವಾದಿ' ಎಂಬ ಎರಡು ರೀತಿಯ ಉಗ್ರವಾದಗಳಿವೆ ಎಂಬುದಾಗಿ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಈ ಕುರಿತು ಸ್ಪಷ್ಟನೆ ನೀಡಿರುವ ಬ್ರಿಟನ್‌ನ ಗೃಹ ಸಚಿವ ಡ್ಯಾನ್ ಜಾರ್ವಿಸ್ ಅವರು 'ವರದಿಯ ಯಾವ ಅಂಶ ಸೋರಿಕೆಯಾಗಿದೆ ಎಂಬುದು ನಿಖರವಾಗಿ ತಿಳಿದಿಲ್ಲ.
ಇದು ಸರ್ಕಾರದ ನೀತಿಯನ್ನು ಪ್ರತಿನಿಧಿಸುವುದಿಲ್ಲ' ಎಂದು ಹೇಳಿದ್ದಾರೆ.
ಸೋರಿಕೆಯಾಗಿರುವ ವರದಿಯಲ್ಲಿ ಒಟ್ಟು 9 ರೀತಿಯ ಉಗ್ರವಾದಗಳನ್ನು ವಿವರಿಸಲಾಗಿದೆ. ಇಸ್ಲಾಮಿಕ್, ತೀವ್ರ ಬಲಪಂಥೀಯವಾದ, ತೀವ್ರ ಸ್ತ್ರೀದ್ವೇಷ, ಖಾಲಿಸ್ತಾನ ಪರ ಉಗ್ರವಾದ, ಹಿಂದೂ ರಾಷ್ಟ್ರೀಯವಾದಿ ಉಗ್ರವಾದ, ಪರಿಸರ ಉಗ್ರವಾದ, ಎಡಪಂಥೀಯವಾದ, ಅರಾಜಕತೆ ಇತ್ಯಾದಿಗಳನ್ನು ಉಲ್ಲೇಖಿಸಿದೆ.
ಆಯಂಡ್ರೀ ಗಿಲ್ಲಿಗನ್ ಮತ್ತು ಡಾ. ಪೌಲ್ ಸ್ಕಾಟ್ ಅವರು ಈ ವರದಿಯನ್ನು ತಯಾರಿಸಿದ್ದಾರೆ. ಉಗ್ರವಾದದ ಕುರಿತು ಈವರೆಗೆ ಬಿಡುಗಡೆಯಾಗಿರುವ ವರದಿಗಳಲ್ಲಿ ಹಿಂದೂ ರಾಷ್ಟ್ರೀಯವಾದಿ ಉಗ್ರವಾದವನ್ನು ಉಲ್ಲೇಖಿಸಿರುವುದು ಇದೇ ಮೊದಲು.