ಕಾಸರಗೋಡು: ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಸೆಳೆಯುವ ನಿಟ್ಟಿನಲ್ಲಿ ಯಾವುದೇ ಮಾನದಂಡವಿಲ್ಲದೆ ಆಂಗ್ಲಮಾಧ್ಯಮ ಆರಂಭಿಸುತ್ತಿರುವುದು ಕನ್ನಡ ಭಾಷೆ ಮತ್ತು ಸಂಸ್ಕøತಿಗೆ ಭಾರಿ ಧಕ್ಕೆ ತಂದೊಡ್ಡಲಿರುವುದಾಗಿ ಖ್ಯಾತ ಅಂಕಣಕಾರ, ಚಿಂತಕ ಮಹಾಬಲೇಶ್ವರ ರಾವ್ ತಿಳಿಸಿದ್ದಾರೆ.
ಅವರು ಕಾಸರಗೋಡು ನಗರಸಭಾಂಗಣದಲ್ಲಿ ಶುಕ್ರವಾರ ಆರಂಭಗೊಂಡ ಕೇರಳ ಪ್ರಾಂತ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ರಾಜ್ಯ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಿ ಮಾತನಾಡಿದರು.
ಇಂದು ಬಹುತೇಕ ಕನ್ನಡ ಮಾಧ್ಯಮ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಭೀತಿ ಎದುರಿಸುತ್ತಿದೆ. ಕರಾರುವಾಕ್ಕು ಹಾಗೂ ಸ್ಪಷ್ಟತೆಯಿಲ್ಲದ 2020ರ ರಾಷ್ಟ್ರೀಯ ಶಿಕ್ಷಣ ನೀತಿ ಶಿಕ್ಷಣ ವ್ಯವಸ್ಥೆಗೆ ತೊಡಕಾಗಿ ಪರಿಣಮಿಸಿದೆ. ಕನ್ನಡ ಭಾವದ ಭಾಷೆ ಮಾತ್ರವಲ್ಲ ಅನ್ನದ ಭಾಷೆ ಎಂಬ ಭಾವನೆ ಪ್ರತಿಯೊಬ್ಬನಲ್ಲಿ ಮೂಡಬೇಕಾದ ಅನಿವಾರ್ಯತೆಯಿದೆ ಎಂದು ತಿಳಿಸಿದರು. ಗಡಿನಾಡಿನಲ್ಲಿ ನಿರಂತರ ನಡೆದುಬರುತ್ತಿರುವ ಕನ್ನಡ ಚಟುವಟಿಕೆ ಇತರರಿಗೆ ಮಾದರಿಯಾಗಿದೆ. ಮಲಯಾಳ ಭಾಷೆಯೊಂದಿಗೆ ಕನ್ನಡವನ್ನು ಬೆಳೆಸುವುದು ಜತೆಗೆ ಆಂಗ್ಲ ಭಾಷೆಯ ಪ್ರಭಾವದ ಮಧ್ಯೆ ಕನ್ನಡ ಶಾಲೆಗಳನ್ನು ಮುಂದುವರಿಸಿಕೊಂಡು ಹೋಗುವುದು ಗಡಿನಾಡಿನಲ್ಲಿ ಸವಾಲಿನ ಕೆಲಸವಾಗುತ್ತಿರುವುದಾಗಿ ತಿಳಿಸಿದರು.
ಕಾಸರಗೋಡು ಶಾಸಕ ಎನ್.ಎ ನೆಲ್ಲಿಕುನ್ನು ಸಮಾರಂಭ ಉದ್ಘಾಟಿಸಿ ಮಾತನಾಡಿ, ಕಾಸರಗೋಡಿನ ಭಾಷಾ ಅಲ್ಪಸಂಖ್ಯಾತರಾದ ಕನ್ನಡಿಗರ ಮೇಲೆ ಬಲವಂತದ ಮಲಯಾಳ ಹೇರಿಕೆಯನ್ನು ಶಾಸಕನಾಗಿ ಮೊದಲಿನಿಂದಲೂ ವಿರೋಧಿಸುತ್ತಾ ಬಂದಿದ್ದು, ಈ ಬಗ್ಗೆ ವಿಧಾನಸಭೆಯಲ್ಲೂ ಧ್ವನಿಯೆತ್ತಿದ್ದೇನೆ. ಭಾಷಾ ಸ್ನೇಹಿಗಳಾಗಿದ್ದ ಮಂಜೇಶ್ವರ ಗೋವಿಂದ ಪೈ, ನಾಡೋಜ ಡಾ. ಕಯ್ಯಾರ ಕಿಞಣ್ಣ ರೈ ಅವರು ಬಾಳಿಬದುಕಿದ ನೆಲದಲ್ಲಿ ಮಲಯಾಳದಷ್ಟೇ ಕನ್ನಡ ಭಾಷೆಗೂ ಪ್ರಾತಿನಿಧ್ಯವಿದ್ದು, ಈ ಬಗ್ಗೆ ಕನ್ನಡಿಗರಿಗೆ ಆತಂಕ ಬೇಡ. ಭಾಷಾ ಅಲ್ಪಸಂಖ್ಯಾತರ ಹಕ್ಕು ಸಂರಕ್ಷಣೆಗೆ ಸದಾ ಬದ್ಧನಿರುವುದಾಗಿ ತಿಳಿಸಿದ ಅವರ, ಜಿಲ್ಲೆಯಲ್ಲಿ ಸರ್ಕಾರಿ ಮುದ್ರಣಾಲಯ ಸ್ಥಾಪನೆಗೆ ಸರ್ಕಾರಕ್ಕೆ ನಿರಂತರ ಒತ್ತಡ ಹೇರುತ್ತಿರುವುದಾಗಿ ತೀಳಿಸಿದರು. ಉದುಮ ಶಾಸಕ ಸಿ.ಎಚ್ ಕುಞಂಬು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಕೇರಳ ಪ್ರಾಂತ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮಾಧ್ಯಮ ಶಾಲಾ ವ್ಯವಸ್ಥಾಪಕರ ಸಂಘದ ಅದ್ಯಕ್ಷ ಜಯದೇವ ಖಂಡಿಗೆ, ನಿವೃತ್ತ ಶಿಕ್ಷಣ ಉಪ ನಿರ್ದೇಶಕ ನಂದಿಕೇಶನ್ ಮೊದಲಾದವರು ಉಪಸ್ಥಿತರಿದ್ದರು.
ಸಂಘಟನೆ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಸ್ವಾಗತಿಸಿದರು. ಸಂಘಟನ ಕಾರ್ಯದರ್ಶಿ ಜಬ್ಬಾರ್ ಬಿ. ಹಾಗೂ ಸಂಚಾಲಕ ದಿವಾಕರ ಬಲ್ಲಾಳ್ ಕಾರ್ಯಕ್ರಮ ನಿರೂಪಿಸಿದರು. ಅಧಿಕೃತ ವಕ್ತಾರ ಸುಕೇಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕೋಶಾಧಿಕಾರಿ ಶರರತ್ ಕುಮಾರ್ ಎಂ ವಂದಿಸಿದರು. ಈ ಸಂದರ್ಭ ಐದು ಕಥಾ ಪುಸ್ತಕಗಳ ಬಿಡುಗಡೆ, ಅಧ್ಯಾಪಕ ಸಂಘಟನೆ ಹೊರತಂದಿರುವ ಹೊಸವರ್ಷದ ಕ್ಯಾಲೆಂಡರ್ ಬಿಡುಗಡೆ, ವಿವಿಧ ವಿಷಯಗಳ ಬಗ್ಗೆ ವಿಚಾರಗೋಷ್ಠಿ, ಅಧ್ಯಾಪಕರಿಂದ ವಿವಿಧ ಸಾಂಸ್ಕ್ರತಿಕ ಕಾರ್ಯಕ್ರಮ ಜರುಗಿತು. ಅದ್ಯಾಪಕ ಸಂಘಟನೆ ಸದಸ್ಯರ ತಂಡ ಸಾಹಿತ್ಯ ರಚಿಸಿ ಹಾಡಿದ ಸ್ವಾಗತ ಗೀತೆ ಗಮನಸೆಳೆಯಿತು. ಕಾರ್ಯಕ್ರಮಕ್ಕೂ ಮೊದಲು ಬೀರಂತಬೈಲು ಕನ್ನಡ ಅದ್ಯಪಕರ ಭವನದಿಂದ ಚೆಂಡೆಮೇಳ, ಹುಲಿಕುಣಿತದೊಂದಿಗೆ ಭವ್ಯ ಮೆರವಣಿಗೆ ನಗರಸಭಾಂಗಣದ ವರೆಗೆ ಸಾಗಿಬಂದಿತ್ತು.
ಇ0ದು ಬೀಳ್ಕೊಡುಗೆ, ಸಮಾರೋಪ:
ಜ. 11ರಂದು ಬೆಳಗ್ಗೆ 9.30ಕ್ಕೆ ಸೇವೆಯಿಂದ ನಿವೃತ್ತರಾಗಲಿರುವ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ ನಡೆಯುವುದು. ವಿಶ್ರಾಂತ ಉಪನ್ಯಾಸಕ ಶಿಕಾರಿಪುರ ಕೃಷ್ಣಮೂರ್ತಿ ಸಮಾರಂಭ ಉದ್ಘಾಟಿಸುವರು. ಸಂಘಟನೆ ಅಧ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಅದ್ಯಕ್ಷತೆ ವಹಿಸುವರು. ಮಧ್ಯಾಹ್ನ 1.30ಕ್ಕೆ ಪ್ರತಿನಿಧಿ ಸಮ್ಮೇಳನ ನಡೆಯುವುದು. ಸಂಜೆ 3ಕ್ಕೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸಂಘಟನೆ ರಾಜ್ಯ ಸಮಿತಿ ಅದ್ಯಕ್ಷ ಶ್ರೀನಿವಾಸ ರಾವ್ ಪಿ.ಬಿ ಅದ್ಯಕ್ಷತೆ ವಹಿಸುವರು. ಮಂಜೇಶ್ವರ ಶಾಸಕ ಎ.ಕೆ.ಎಂ ಅಶ್ರಫ್ ಉದ್ಘಾಟಿಸುವರು. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿಲ್ಪಾ ದೇವಯ್ಯ ಹಾಗೂ ಕಾಸರಗೋಡು ನಗರಸಭಾ ಅದ್ಯಕ್ಷ ಅಬ್ಬಾಸ್ ಬೀಗಂ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.ಪತ್ರಕರ್ತರಾದ ಡಾ ಪ್ರಿಯಾ ಹರೀಶ್ ಮುಖ್ಯ ಭಾಷಣ ಮಡುವರು. ಈ ಸಂದರ್ಭ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯುವುದು