ಚುರಾಚಾಂದ್‌ಪುರ: ಜನಾಂಗೀಯ ಸಂಘರ್ಷಪೀಡಿತ ಮಣಿಪುರ ರಾಜ್ಯದಲ್ಲಿ ವರ್ಷದ ಕೊನೆ ದಿನ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗಾಪೋಕ್ಪಿ ಜಿಲ್ಲೆಯಲ್ಲಿ ಮಂಗಳವಾರ ಕುಕಿ-ಜೋ ಮಹಿಳೆಯರ ನೇತೃತ್ವದ ಗುಂಪು ಮತ್ತು ಭದ್ರತಾ ಪಡೆಗಳ ನಡುವೆ ಭಾರಿ ಘರ್ಷಣೆ ನಡೆದಿದೆ.
ಸೇನೆ, ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್‌ನ ಸಂಯೋಜಿತ ಭದ್ರತಾ ಪಡೆಗಳ ನಿಯೋಜನೆಗೆ ಸ್ಥಳೀಯ ಜನರ ಗುಂಪು ಅಡ್ಡಿಪಡಿಸಲು ಪ್ರಯತ್ನಿಸಿದ ನಂತರ ಥಮ್ನಾಪೋಕ್ಪಿ ಸಮೀಪದ ಉಯೋಕ್ಚಿಂಗ್‌ನಲ್ಲಿ ಈ ಘಟನೆ ಸಂಭವಿಸಿದೆ ಎಂದು ಪೊಲೀಸರು 'ಎಕ್ಸ್' ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
'ಜಂಟಿ ಪಡೆಗಳು ಜನರ ಗುಂಪನ್ನು ಚದುರಿಸಿವೆ. ಈಗ ಪರಿಸ್ಥಿತಿ ಶಾಂತವಾಗಿದ್ದು, ನಿಯಂತ್ರಣದಲ್ಲಿದೆ. ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಭದ್ರತಾ ಪಡೆಗಳನ್ನು ಆಯಕಟ್ಟಿನ ಜಾಗಗಳಲ್ಲಿ ನಿಯೋಜಿಸಲಾಗಿದೆ' ಎಂದು ಅವರು ತಿಳಿಸಿದ್ದಾರೆ.
ಟ್ವಿಚಿಂಗ್‌ನ ಸೈಬೋಲ್ ಗ್ರಾಮದಲ್ಲಿ ಭದ್ರತಾ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಹಲವು ಮಂದಿ ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಸೈಬೋಲ್ ಅನ್ನು ಕುಕಿ ಮತ್ತು ಮೈತೇಯಿ ಪ್ರಾಬಲ್ಯದ ಇಂಫಾಲ್ ಕಣಿವೆಯ ನಡುವಿನ ಬಫರ್ ವಲಯವಾಗಿ ಗುರುತಿಸಲಾಗಿದೆ.
ಆದಾಗ್ಯೂ, ಗಾಯಗೊಂಡವರ ಸಂಖ್ಯೆಯ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.
ಸಮುದಾಯ ಬಂಕರ್‌ಗಳನ್ನು ಭದ್ರತಾ ಪಡೆಗಳು ಬಲವಂತದಿಂದ ಆಕ್ರಮಿಸಲು ಮುಂದಾದವು. ಆಗ ಪ್ರತಿಭಟಿಸಲು ಸ್ಥಳೀಯ ಮಹಿಳೆಯರು ಜಮಾಯಿಸಿದರು. ಪ್ರತಿಭಟನಕಾರರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಬಳಸಿದಾಗ ಉದ್ವಿಗ್ನ ಪರಿಸ್ಥಿತಿ ಉಲ್ಬಣಿಸಿತು ಎಂದು ಕುಕಿ ಮುಖಂಡರು ಆರೋಪಿಸಿದರು.
'ಅದು ಯುದ್ಧಭೂಮಿಯಂತಿತ್ತು. ನಾವು ನಮ್ಮ ಕಳವಳಗಳನ್ನು ವ್ಯಕ್ತಪಡಿಸಲು ಬಂದಿದ್ದೇವೆ. ಯುದ್ಧ ತಂತ್ರಗಳನ್ನು ಎದುರಿಸಲು ಅಲ್ಲ' ಎಂದು ಪ್ರತಿಭಟನಕಾರರೊಬ್ಬರು ತಿಳಿಸಿದರು.
ಭದ್ರತಾ ಸಿಬ್ಬಂದಿ ನಡೆಸಿದ ಬಲಪ್ರಯೋಗದಲ್ಲಿ ಅನೇಕ ಮಹಿಳೆಯರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆಯ (ಐಟಿಎಲ್‌ಎಫ್) ಮಹಿಳಾ ವಿಭಾಗ ಹೇಳಿದೆ.
'ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಕುಕಿ ಮಹಿಳೆಯರನ್ನು ಭದ್ರತಾ ಪಡೆಗಳು ಗುರಿಯಾಗಿಸಿಕೊಂಡಿವೆ' ಎಂದು ಕುಕಿ ವಿಮೆನ್ ಆರ್ಗನೈಸೇಶನ್ ಫಾರ್ ಹ್ಯೂಮನ್ ರೈಟ್ಸ್ (ಕೆಡಬ್ಲ್ಯುಒಎಚ್‌ಆರ್) ಆರೋಪಿಸಿದೆ.
ಕುಕಿ ಮಹಿಳೆಯರ ಮೇಲೆ ದೈಹಿಕ ಹಲ್ಲೆ ನಡೆದಿದೆ. ಅವರ ಬಟ್ಟೆಗಳನ್ನು ಹರಿದು ಹಾಕಿ, ಕಿರುಕುಳ ನೀಡಲಾಗಿದೆ. ನಿರಾಯುಧ ಅಮಾಯಕ ಕುಕಿ ಮಹಿಳೆಯರ ಮೇಲೆ ಲಾಠಿ ಚಾರ್ಜ್ ಮತ್ತು ಅಶ್ರುವಾಯು ಬಳಸಲಾಗಿದೆ ಎಂದು ಅದು ಆರೋಪಿಸಿದೆ.
'ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಗಳು ಬಫರ್ ವಲಯಗಳನ್ನು ನಿರ್ವಹಿಸಲು ಮತ್ತು 19 ತಿಂಗಳಿಗಿಂತ ಹೆಚ್ಚು ಸಮಯದ ನಂತರವೂ ಮೈತೇಯಿ ಸಮುದಾಯದವರು ನಮ್ಮ ಮೇಲೆ ದಾಳಿ ಮಾಡುವುದನ್ನು ತಡೆಯಲು ಅಸಮರ್ಥವಾಗಿದ್ದರೆ, ಅವರು ಬಫರ್ ವಲಯಗಳನ್ನು ತ್ಯಜಿಸಬೇಕು. ಇದರಿಂದ ನಮ್ಮ ಸ್ವಯಂಸೇವಕರು ನಮ್ಮನ್ನು ರಕ್ಷಿಸಲು ಅಗತ್ಯ ಕ್ರಮ ತೆಗೆದುಕೊಳ್ಳಲಿದ್ದಾರೆ' ಎಂದು ಕುಕಿ ಮಹಿಳಾ ಒಕ್ಕೂಟ ಹೇಳಿದೆ.