ನವದೆಹಲಿ: ಹೆಸರಾಂತ ಭೌತ ವಿಜ್ಞಾನಿ, ಭಾರತದ 'ಪರಮಾಣು ಶಕ್ತಿ ಸಜ್ಜಿತ ಶಸ್ತ್ರಾಸ್ತ್ರ ಕಾರ್ಯಕ್ರಮ'ಗಳ ರೂವಾರಿ ಡಾ.ರಾಜಗೋಪಾಲ ಚಿದಂಬರಂ ಶನಿವಾರ ಮುಂಬೈನಲ್ಲಿ ನಿಧನರಾದರು.
ಅವರಿಗೆ 88 ವರ್ಷವಾಗಿತ್ತು. ಅವರಿಗೆ ಪತ್ನಿ ಚೆಲ್ಲಾ, ಪುತ್ರಿಯರಾದ ನಿರ್ಮಲಾ, ನಿತ್ಯಾ ಇದ್ದಾರೆ.
ಕೆಲವು ದಿನಗಳಿಂದ ಅವರು ಅಸ್ವಸ್ಥರಾಗಿದ್ದರು. ಮುಂಬೈನ ಜಸ್‌ಲೋಕ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಅಲ್ಲಿಯೇ ಬೆಳಿಗ್ಗೆ ಮೃತಪಟ್ಟರು.
ಭಾರತವು ಪರಮಾಣು ಶಕ್ತಿ ಪರೀಕ್ಷೆ ನಡೆಸಿದ್ದ ಪೋಖ್ರಾನ್-1 ಮತ್ತು ಪೋಖ್ರಾನ್-2 ಕಾರ್ಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದ ಭೌತವಿಜ್ಞಾನಿ ಚಿದಂಬರಂ.
ನ. 12, 1936ರಂದು ಚೆನ್ನೈನಲ್ಲಿ ಜನಿಸಿದ್ದ ಚಿದಂಬರಂ, ಮೀರತ್‌ನ ಸನಾತನಧರ್ಮ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮತ್ತು ಮೈಲಾಪುರ್‌ನ ಪಿ.ಎಸ್. ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ ಪಡೆದರು.
ಚೆನ್ನೈನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪೂರೈಸಿದ ತರುವಾಯ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣವನ್ನುಪಡೆದಿದ್ದರು.
ಅಗಣಿತ ಸಾಧಕ, 'ಅಣುಶಕ್ತಿ ಸಾಮರ್ಥ್ಯ'ದ ದಿಕ್ಕು ತೋರಿದ ಚಿಂತಕ
ನವದೆಹಲಿ: ಅದು, 1998ನೇ ವರ್ಷ. ರಾಜಸ್ಥಾನದ ಪೋಖ್ರಾನ್‌ನಲ್ಲಿ ಸದ್ದಿಲ್ಲದೇ ಮಹತ್ವದ 'ಪರೀಕ್ಷೆ' ನಡೆದಿತ್ತು. ಅದರ ಹೆಸರು 'ಆಪರೇಷನ್ ಶಕ್ತಿ'. ಪರೀಕ್ಷೆ ಯಶಸ್ಸನ್ನು 'ಬುದ್ಧ ಮತ್ತೆ ನಕ್ಕ' ಎಂದು ವ್ಯಾಖ್ಯಾನಿಸಲಾಗಿತ್ತು. ಆ ಪರೀಕ್ಷೆಯ ಬಳಿಕ ಜಗತ್ತಿನ ರಾಷ್ಟ್ರಗಳ ದೃಷ್ಟಿ ಭಾರತದತ್ತ ಹೊರಳಿತ್ತು.
ಆಗ ಪ್ರಧಾನಿಯಾಗಿದ್ದ ಎ.ಬಿ.ವಾಜಪೇಯಿ ಅವರು, 'ಭಾರತ ಇನ್ನು ಮುಂದೆ ಪರಮಾಣು ಶಕ್ತಿ ಸಜ್ಜಿತ ರಾಷ್ಟ್ರ' ಎಂದು ಘೋಷಿಸಿದ್ದರು. ಈ ಪರೀಕ್ಷೆಯ ಪ್ರಮುಖ ರೂವಾರಿಗಳಲ್ಲಿ ಒಬ್ಬರು ಆರ್.ಚಿದರಂಬಂ.
ಭಾರತ ಅದಕ್ಕೂ ಹಿಂದೆ 1974ರಲ್ಲೂ ಪ್ರಧಾನಿ ಇಂದಿರಾಗಾಂಧಿ ಅವರ ಅಧಿಕಾರವಧಿಯಲ್ಲಿಯೂ ಪರಮಾಣು ಶಕ್ತಿ ಸಾಮರ್ಥ್ಯದ ಪರೀಕ್ಷೆ ನಡೆಸಿತ್ತು. ಆಗ, ಕಾರ್ಯಾಚರಣೆಗೆ 'ಸ್ಮೈಲಿಂಗ್ ಬುದ್ಧ' ಎಂದು ಹೆಸರಿಸಲಾಗಿತ್ತು. ಆಗಲೂ ಈ ಕಾರ್ಯಕ್ರಮದ ಮುಂಚೂಣಿಯಲ್ಲಿ ಇದ್ದವರು ಆರ್.ಚಿದಂಬರಂ.
ಮುಂಬೈನ ಆಸ್ಪತ್ರೆಯಲ್ಲಿ ಶನಿವಾರ ಚಿರನಿದ್ರೆಗೆ ಜಾರಿದ ರಾಜಗೋಪಾಲ ಚಿದಂಬರಂ ಅವರು, ಭಾರತ ಪರಮಾಣು ಶಕ್ತಿ ಸಜ್ಜಿತ ಸಾಮರ್ಥ್ಯ ದಕ್ಕಿಸಿಕೊಳ್ಳಲು ಸ್ಪಷ್ಟ ಚೌಕಟ್ಟು ಹಾಕಿಕೊಟ್ಟವರಲ್ಲಿ ಒಬ್ಬರು.
ದೇಶದಲ್ಲಿ ಭೌತವಿಜ್ಞಾನ ಕ್ಷೇತ್ರಕ್ಕೆ ಅಗಣಿತ ಸೇವೆ ಸಲ್ಲಿಸಿರುವ ಅವರು ಅಂತರರಾಷ್ಟ್ರೀಯ ಖ್ಯಾತಿಯ ಸ್ಫಟಿಕ ತಜ್ಞ. ಅಸಂಖ್ಯ ವಿಜ್ಞಾನಿಗಳು ಮತ್ತು ಎಂಜಿನಿಯರುಗಳಿಗೆ ಮಾರ್ಗದರ್ಶಕ, ಪ್ರೇರಕ ಶಕ್ತಿ ಆಗಿದ್ದವರು. ಅವರ ಅವಧಿಯಲ್ಲಿ ಜಾರಿಗೊಂಡ ಹಲವು ಹೊಸತುಗಳ ಪರಿಣಾಮ ಭಾರತ ಇಂದು ಜಾಗತಿಕವಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದೆ.
ವಿಶ್ವಮಾನ್ಯ ಭೌತಶಾಸ್ತ್ರಜ್ಞರಾಗಿದ್ದ ಅವರು ವಿಜ್ಞಾನ ಕ್ಷೇತ್ರದ ಚಾಣಾಕ್ಷ ಆಡಳಿತಗಾರರೂ ಆಗಿದ್ದರು. ಅಣುಶಕ್ತಿ ಭೌತವಿಜ್ಞಾನ ಕ್ಷೇತ್ರಕ್ಕೆ ಗಣನೀಯ ಸೇವೆ ನೀಡುವ ಜೊತೆಗೆ, ಗ್ರಾಮೀಣ ಭಾರತದ ಜನಸಮುದಾಯವನ್ನು ಸಬಲರಾಗಿಸಲು ಹಲವು ನವೀನ ತಂತ್ರಜ್ಞಾನಗಳನ್ನು ಪರಿಚಯಿಸಿದ್ದರು.
1962ರಲ್ಲಿ ದೇಶದ ಪ್ರತಿಷ್ಠಿತ ಭಾಭಾ ಅಣುಶಕ್ತಿ ಸಂಶೋಧನಾ ಕೇಂದ್ರ (ಬಿಎಆರ್‌ಸಿ) ಸೇರಿದ್ದ ಅವರು, 1990ರಲ್ಲಿ ಅದರ ನಿರ್ದೇಶಕ ಸ್ಥಾನದವರೆಗೂ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿದರು. ದೇಶದ ಅಣುಶಕ್ತಿ ಕಾರ್ಯಕ್ರಮಕ್ಕೆ ಚೇತರಿಕೆ ನೀಡಲು 1993ರಲ್ಲಿ ರಚಿಸಲಾಗಿದ್ದ ಅಣುಶಕ್ತಿ ಆಯೋಗದ ಅಧ್ಯಕ್ಷರಾಗಿದ್ದರು. ಆ ಅವಧಿಯಲ್ಲಿ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿಯೂ ಆಗಿದ್ದರು.
2001ರಲ್ಲಿ ಸೇವಾ ನಿವೃತ್ತಿಯಾದ ಬಳಿಕ ಸರ್ಕಾರ ಅವರನ್ನು ಪ್ರಧಾನ ವೈಜ್ಞಾನಿಕ ಸಲಹೆಗಾರರಾಗಿ ನೇಮಿಸಿತ್ತು. 2018ರವರೆಗೂ ಆ ಹುದ್ದೆಯಲ್ಲಿದ್ದರು. 1994-95ನೇ ಸಾಲಿನಲ್ಲಿ ಅಂತರರಾಷ್ಟ್ರೀಯ ಅಣುಶಕ್ತಿ ಏಜೆನ್ಸಿ (ಐಎಇಎ) ಆಡಳಿತ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಚಿದಂಬರಂ ಅವರು ನ್ಯಾನೊ ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಭಾರತದ ಮುನ್ನಡೆಗೆ ನಾಂದಿ ಹಾಡಿದ್ದರು. ರಾಷ್ಟ್ರೀಯ ಜ್ಞಾನಜಾಲ (ಎನ್‌ಕೆಎನ್) ಅನುಷ್ಠಾನದ ಜೊತೆಗೆ ಗ್ರಾಮೀಣ ಜನಸಮುದಾಯಕ್ಕೆ ತಂತ್ರಜ್ಞಾನದ ನೆರವು ತಲುಪಿಸಲು ಗ್ರಾಮೀಣ ತಂತ್ರಜ್ಞಾನ ಕಾರ್ಯತಂಡ (ರು-ಟ್ಯಾಗ್) ರಚಿಸಿದ್ದರು.
ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದಲ್ಲಿ ದೇಶ ಪ್ರವರ್ಧಮಾನಕ್ಕೆ ಬರಲು ನೆರವಾದ ವಿವಿಧ ಯೋಜನೆಗಳ ಜೊತೆಗೆ ಇಂಧನ, ಆರೋಗ್ಯ, ಕಾರ್ಯತಂತ್ರ ಕ್ಷೇತ್ರಗಳಲ್ಲೂ ಗಣನೀಯ ಕೊಡುಗೆ ನೀಡಿದ್ದಾರೆ.
1998ರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಅಧ್ಯಕ್ಷರಾಗಿದ್ದ, ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಜೊತೆಗೂಡಿ ಪೋಖ್ರಾನ್‌ನಲ್ಲಿ ಪರಮಾಣು ಶಕ್ತಿ ಪರೀಕ್ಷೆ ಯಶಸ್ಸಿಗೆ ಕಾರಣರಾಗಿದ್ದರು. ಆ ವರ್ಷ ಮೇ 11 ರಿಂದ 13ರ ಅವಧಿಯಲ್ಲಿ ಭಾರತ 5 ಪರಮಾಣು ಶಕ್ತಿ ಪರೀಕ್ಷೆ ನಡೆಸಿತ್ತು. ಇವುಗಳಲ್ಲಿ 'ನ್ಯೂಟ್ರಾನ್ ಬಾಂಬ್' ಪರೀಕ್ಷೆ ಕೂಡಾ ಒಂದಾಗಿತ್ತು.
ಭೌತವಿಜ್ಞಾನ ಕ್ಷೇತ್ರದಲ್ಲಿ ಚಿದಂಬರಂ ಅವರು ಸಲ್ಲಿಸಿದ್ದ ಅಗಣಿತ ಸೇವೆಗಾಗಿ ಕೇಂದ್ರ ಸರ್ಕಾರ ಅವರಿಗೆ 1975ರಲ್ಲಿ ಪದ್ಮಶ್ರಿ ಹಾಗೂ 1999ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ನೀಡಿ ಪುರಸ್ಕರಿಸಿತ್ತು. ಇದರ ಜೊತೆಗೆ ಹಲವು ವಿಶ್ವವಿದ್ಯಾಲಗಳು ಡಾಕ್ಟರೇಟ್ ಗೌರವ ಪ್ರದಾನ ಮಾಡಿ ಪುರಸ್ಕರಿಸಿದ್ದವು.
ವಿಜ್ಞಾನ ಕ್ಷೇತ್ರದಲ್ಲಿ ದೇಶದ ಪ್ರಮುಖರಾದ ಡಾ.ವಿಕ್ರಂ ಸಾರಾಭಾಯಿ, ಡಾ.ಎ.ಪಿ.ಜೆ.ಅಬ್ದುಲ್ ಕಲಾಂ, ಡಾ.ಹೊಮಿ ಸೆತ್ನಾ, ಡಾ.ರಾಜಾ ರಾಮಣ್ಣ, ಡಾ.ಎಂ.ಆರ್.ಶ್ರೀನಿವಾಸನ್ ಅವರ ಜೊತೆ ಕೆಲಸ ಮಾಡಿದ್ದರು.