ಕಾಸರಗೋಡು: ನಗರದಲ್ಲಿ ಕಾರ್ಯಾಚರಿಸುತ್ತಿರುವ ಜನರಲ್ ಆಸ್ಪತ್ರೆ ಇನ್ನು ಮುಂದೆ ವೈದ್ಯಕೀಯ ಕಾಲೇಜು ಆಗಿ ಮೇಲ್ದರ್ಜೆಗೇರಲಿದೆ. ಈ ಬಗ್ಗೆ ಸರ್ಕಾರದಿಂದ ಅದಿಕೃತ ಪ್ರಕಟಣೆ ಇನ್ನಷ್ಟೆ ಹೊರಬರಬೇಕಾಗಿದೆ. ಉಕ್ಕಿನಡ್ಕದಲ್ಲಿ ನಿರ್ಮಾಣಹಂತದಲ್ಲಿರುವ ಕಾಸರಗೋಡು ವೈದ್ಯಕೀಯ ಕಾಲೇಜಿಗೆ ಪೂರಕವಾಗಿ ವೈದ್ಯಕೀಯ ಕಾಲೇಜು ಆಸ್ಪತ್ರೆ ಜನರಲ್ ಆಸ್ಪತ್ರೆಯಲ್ಲಿ ಕಾರ್ಯಾಚರಿಸಲಿದೆ.
ಈ ಬಗ್ಗೆ ರಾಜ್ಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಅಧಿಸೂಚನೆ ಹೊರಡಿಸಿದ್ದಾರೆ. ಜನರಲ್ ಆಸ್ಪತ್ರೆಯಲ್ಲಿ ಪ್ರಸಕ್ತ ಇರುವ ಸೌಲಬ್ಯಗಳನ್ನು ಸರ್ಕಾರಿ ವೈದ್ಯಕೀಯ ಕಾಲೇಜಿನ ಭಾಗವಾಗಿ ಮುನ್ನಡೆಸಿಕೊಂಡು ಹೋಗಲು ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಆಸ್ಪತ್ರೆಯ ಆರೋಗ್ಯಸೇವಾ ನಿರ್ದೇಶಕ(ಹೆಲ್ತ್ ಸರ್ವೀಸ್ ಡೈರೆಕ್ಟರ್)ರಿಂದ ಆರಂಭಗೊಂಡು ಎಲ್ಲಾ ವೈದ್ಯರೂ ಇನ್ನು ಈ ಆಸ್ಪತ್ರೆಯಲ್ಲಿ ಡೆಪ್ಯುಟೇಶನ್ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಈಗಾಗಲೇ ಉಕ್ಕಿನಡ್ಕದಲ್ಲಿ ನಿರ್ಮಾಣಹಂತದಲ್ಲಿರುವ 220ಹಾಸಿಗೆಗಳ ಸುಸಜ್ಜಿತ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಕಾಮಗಾರಿ ಪೂರ್ತಿಗೊಳ್ಳಲು ಇನ್ನೂ ಕಾಲಾವಕಾಶ ತಗಲುವ ಹಿನ್ನೆಲೆಯಲ್ಲಿ ಕಾಸರಗೋಡಿನ ಜನರಲ್ ಆಸ್ಪತ್ರೆಯಲ್ಲಿ ಎಂಬಿಬಿಎಸ್ ಕೋರ್ಸ್ ಆರಂಭಿಸುವ ಗುರಿಯಿರಿಸಲಾಗಿದೆ. ಹೊಸದಾಗಿ ಆರಂಭಗೊಳ್ಳುವ ಆಸ್ಪತ್ರೆಗೆ ಮೂರು ವರ್ಷಗಳ ಸೇವಾ ಅನುಭವ ಹೊಂದಿದ್ದಲ್ಲಿಮಾತ್ರ ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಿಸಲು ಗ್ರೀನ್ ಸಿಗ್ನಲ್ ಸಿಗಲಿದೆ. ಉಕ್ಕಿನಡ್ಕದ ವೈದ್ಯಕೀಯ ಕಾಲೆಜು ಆಸ್ಪತ್ರೆ ಕಾಮಗಾರಿ ನಿಧಾನಗತಿಯಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಮಾನದಂಡ ಪ್ರಕಾರ ರೋಗಿಗಳನ್ನು ದಾಖಲಿಸಿ ಚಿಕಿತ್ಸೆ ನಿಡುವ ರೀತಿಯಲ್ಲಿ ಆಸ್ಪತ್ರೆ ಎದ್ದುನಿಲ್ಲಬೇಕಾದರೆ ಇನ್ನಷ್ಟು ಕಾಲಾವಕಾಶ ಬೇಕಾಗಿಬರಲಿದೆ. ವೈದ್ಯಕೀಯ ಕಾಲೇಜು ಆಸ್ಪತ್ರೆ ಆರಂಭಗೊಳ್ಳಬೇಕಾದರೆ ಮತ್ತೆ ಮೂರು ವರ್ಷ ಕಾಲ ಕಾಯಬೇಕು. ಈ ವಿಳಂಬ ತಪ್ಪಿಸಲು ಸರ್ಕಾರ ಕಾಸರಗೊಡು ಜನರಲ್ ಆಸ್ಪತ್ರೆಯನ್ನು ಉಕ್ಕಿನಡ್ಕದ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಭಾಗವಾಗಿ ಮುಂದುವರಿಸಿದ ನಂತರ ಉಕ್ಕಿನಡ್ಕದ ಕಟ್ಟಡ ಕಾಮಗಾರಿ ಶೀಘ್ರ ಪೂರ್ತಿಗೊಳಿಸಿ ಅಲ್ಲೇ ವೈದ್ಯಕೀಯ ಕಾಲೇಜು ಆಸ್ಪತ್ರೆ ಮುಂದುವರಿಸಲು ತೀರ್ಮಾನಿಸಿದೆ.
ನಿರ್ಲಕ್ಷ್ಯ ವಹಿಸಿದಲ್ಲಿ ಎರಡೂ ಯೋಜನೆ ವ್ಯರ್ಥ?:
ಬದಿಯಡ್ಕ ಪಂಚಾಯಿತಿಯ ಉಕ್ಕಿನಡ್ಕದಲ್ಲಿ 2013ರಲ್ಲಿ ಆರಂಭಿಸಿದ್ದ ಕಾಸರಗೋಡು ವೈದ್ಯಕೀಯ ಕಾಲೇಜು ಆಸ್ಪತ್ರೆ ಕಟ್ಟಡ ಮೂರು ವರ್ಷ ಕಾಲಾವಧಿಯಲ್ಲಿ ಪೂರ್ತಿಗೊಳಿಸಲು ಯೋಜನೆಯಿರಿಸಿಕೊಳ್ಳಲಾಗಿದ್ದರೂ, 11ವರ್ಷ ದಾಟಿದರೂ ಕಾಮಗಾರಿ ಪೂರ್ತಿಗೊಳಿಸಲಾಗದಿರುವ ಬಗ್ಗೆ ಸರ್ಕಾರಕ್ಕೆ ಜನತೆ ಹಿಡಿಶಾಪ ಹಾಖುತ್ತಿದ್ದಾರೆ. ಈ ಮಧ್ಯೆ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ಕಾಲೇಜು ಅಸ್ಪತ್ರೆ ಅರಂಭಿಸುವ ಸರ್ಕಾರದ ಧ್ಯೇಯೋದ್ದೇಶ ಉತ್ತಮವಾಗಿದ್ದರೂ, ವೈದ್ಯಕೀಯ ಕಾಲೇಜಿಗೆ ವೈದ್ಯರ ನೇಮಕಾತಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಮೀನಾಮೇಷ ಎಣಿಸಿದರೆ, ಎರಡೂ ಯೋಜನೆಗಳು ವ್ಯರ್ಥವಾಗುವ ಸಾಧ್ಯತೆ ಇದೆ. ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿರುವ ಎಣ್ಮಕಜೆ, ಬೆಳ್ಳೂರು, ಕುಂಬ್ಡಾಜೆ ಪಂಚಾಯಿತಿಗೆ ಅತ್ಯಂತ ಸನಿಹದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆ ತಲೆಯೆತ್ತುತ್ತಿರುವುದು ಸಂತ್ರಸ್ತರಲ್ಲೂ ಆಶಾದಾಯಕ ಭರವಸೆ ಮೂಡಿಸಿತ್ತು. ಸರ್ಕಾರದ ವಿಳಂಬ ಧೋರಣೆಯಿಂದ ಎಂಡೋ ಸಂತ್ರಸ್ತ ರೋಗಿಗಳೂ ಸಂಕಷ್ಟ ಅನುಭವಿಸುವಂತಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಪರಿಗಣನೆಯೊಂದಿಗೆ ವೈದ್ಯಕೀಯ ಕಾಲೇಜು ಆಸ್ಪತ್ರೆ ಕಾಮಗಾರಿ ಪೂರೈಸಲು ಕ್ರಮ ಕೈಗೊಳ್ಳುವಂತೆ ನಾಗರಿಕರೂ ಆಗ್ರಹಿಸಿದ್ದಾರೆ.