ಒಟ್ಟಾವ: ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದು, ಆಡಳಿತಾರೂಢ ಲಿಬರಲ್ ಪಾರ್ಟಿ ಹೊಸ ನಾಯಕನನ್ನು ಆಯ್ಕೆ ಮಾಡಿದ ತಕ್ಷಣವೇ ಅಧಿಕಾರ ತ್ಯಜಿಸುವುದಾಗಿ ಸೋಮವಾರ ಪ್ರಕಟಿಸಿದ್ದಾರೆ.
ತಮ್ಮ ನಾಯಕತ್ವಕ್ಕೆ ಪಕ್ಷದಲ್ಲೇ ಅಪಸ್ವರ ಕೇಳಿಬಂದಿರುವುದು ಮತ್ತು ಜನಪ್ರಿಯತೆ ಕುಸಿಯುತ್ತಿರುವುದರಿಂದ ರಾಜೀನಾಮೆಗೆ ಟ್ರುಡೊ ಮುಂದಾಗಿದ್ದಾರೆ ಎಂದು 'ದಿ ಗ್ಲೋಬ್ ಆಯಂಡ್ ಮೇಲ್' ದಿನಪತ್ರಿಕೆ ಸೇರಿದಂತೆ ಕೆನಡಾ ಮಾಧ್ಯಮಗಳು ವರದಿ ಮಾಡಿದ್ದವು.
ಸ್ಥಳೀಯ ಕಾಲಮಾನ ಸೋಮವಾರ ಬೆಳಿಗ್ಗೆ 10.45ಕ್ಕೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಲಿಬರಲ್ ಪಾರ್ಟಿಯ ನಾಯಕತ್ವ ಮತ್ತು ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಲು ನಿರ್ಧರಿಸಿದ್ದೇನೆ' ಎಂದು ಹೇಳಿದರು.
'ಸ್ವಪಕ್ಷೀಯರಿಂದಲೇ ವಿರೋಧ ಎದುರಿಸುತ್ತಿರುವಾಗ, ಮುಂದಿನ ಚುನಾವಣೆಯಲ್ಲಿ ನಾನು ಅಧ್ಯಕ್ಷ ಸ್ಥಾನಕ್ಕೆ ಅತ್ಯುತ್ತಮ ಆಯ್ಕೆಯಾಗಲು ಸಾಧ್ಯವಿಲ್ಲ' ಎಂದು ತಿಳಿಸಿದರು.
2015ರಿಂದ ಕೆನಡಾ ಪ್ರಧಾನಿಯಾಗಿರುವ ಟ್ರುಡೊ ಅವರು ಬುಧವಾರ ನಡೆಯಲಿರುವ ಪಕ್ಷದ ರಾಷ್ಟ್ರೀಯ ಕಾಕಸ್ ಅಧಿವೇಶನದ (ಸದಸ್ಯರ ಸಭೆ) ಮುನ್ನವೇ ಅವರು ರಾಜೀನಾಮೆ ನೀಡುವರು ಎಂದು ವರದಿಯಾಗಿತ್ತು. 53 ವರ್ಷದ ಟ್ರುಡೊ ಅವರ ಉತ್ತರಾಧಿಕಾರಿಯ ಆಯ್ಕೆಗೆ ಲಿಬರಲ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯು ಯಾವ ಯೋಜನೆ ರೂಪಿಸಿದೆ ಎಂಬುದು ತಿಳಿದುಬಂದಿಲ್ಲ.
ನಾಯಕತ್ವ ಕುರಿತು ನಿರ್ಧರಿಸುವ ಲಿಬರಲ್ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯು ಈ ವಾರ ಸಭೆ ಸೇರಲು ತೀರ್ಮಾನಿಸಿದೆ. ಕಾಕಸ್ ಅಧಿವೇಶನ ನಡೆದ ಬಳಿಕ ಸಭೆ ನಡೆಯುವ ಸಾಧ್ಯತೆಯಿದೆ. ನೂತನ ನಾಯಕನನ್ನು ಆಯ್ಕೆ ಮಾಡುವವರೆಗೂ ಟ್ರುಡೊ ಅವರು ಪ್ರಧಾನಿ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ ಎಂದು ಭಾನುವಾರ ಮೂಲವೊಂದು ತಿಳಿಸಿತ್ತು.