ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರ ಪಾಸ್‌ಪೋರ್ಟ್ ಅನ್ನು ಮಧ್ಯಂತರ ಸರ್ಕಾರ ರದ್ದುಗೊಳಿಸಿದೆ.
2024ರ ಜುಲೈನಲ್ಲಿ ದೇಶದಲ್ಲಿ ನಡೆದ ಹತ್ಯೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, 96 ಮಂದಿಯ ಪಾಸ್‌ಪೋರ್ಟ್ ಅನ್ನು ಹಿಂಪಡೆಯಲಾಗಿದೆ.
ಕಣ್ಮರೆಯಾಗಿರುವ 22 ಜನರ ಪಾಸ್‌ಪೋರ್ಟ್‌ಗಳನ್ನು ಪಾಸ್‌ಪೋರ್ಟ್ ಇಲಾಖೆ ರದ್ದುಗೊಳಿಸಿದೆ. ಜುಲೈನಲ್ಲಿ ನಡೆದ ಹತ್ಯೆಯಲ್ಲಿ ಭಾಗಿಯಾದ ಆರೋಪದ ಮೇಲೆ, ಇದೇ ಸಂದರ್ಭದಲ್ಲಿ ಶೇಖ್ ಹಸೀನಾ ಸೇರಿದಂತೆ 75 ಜನರ ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸಿದೆ' ಎಂದು ಮುಖ್ಯ ಸಲಹೆಗಾರರ ಉಪ ಪತ್ರಿಕಾ ಕಾರ್ಯದರ್ಶಿ ಅಬುಲ್ ಕಲಾಂ ಆಜಾದ್ ಮಜುಂದಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧಗಳ ನ್ಯಾಯಮಂಡಳಿಯು (ಐಸಿಟಿ) ನರಮೇಧ ನಡೆಸಿದ ಅಪರಾಧಕ್ಕಾಗಿ ಹಸೀನಾ ಸೇರಿದಂತೆ ಮಾಜಿ ಸಚಿವರು, ಸಲಹೆಗಾರರು, ಸೇನೆ ಹಾಗೂ ನಾಗರಿಕ ಅಧಿಕಾರಿಗಳ ವಿರುದ್ಧ ಬಂಧನದ ವಾರಂಟ್ ಹೊರಡಿಸಿದೆ.
ವಿದ್ಯಾರ್ಥಿಗಳ ಬೃಹತ್ ಪ್ರತಿಭಟನೆಯ ನಂತರ ಶೇಖ್ ಹಸೀನಾ ನೇತೃತ್ವದ ಅವಾಮಿ ಲೀಗ್‌ನ (ಎಎಲ್) 16 ವರ್ಷಗಳ ಆಡಳಿತವು ಕಳೆದ ಆ. 5ರಂದು ಕೊನೆಗೊಂಡಿತ್ತು.