ಮಂಗಳೂರು: ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಡಾ. ನೋರ್ಬೆರ್ಟ್ ಡಿಸೋಜ (Na D’Souza) ತೀವ್ರ ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ. 88 ವರ್ಷದ ಡಿಸೋಜ ಅವರು ಅನಾರೋಗ್ಯ ಹಿನ್ನೆಲೆಯಲ್ಲಿ ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ 7.50ಕ್ಕೆ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ 1937ರ ಜೂನ್ 6ರಂದು ಡಿಸೋಜ ಜನಿಸಿದರು. ಪರಿಸರ ಕಾಳಜಿ ಜೊತೆಗೆ ಕನ್ನಡ ಸಾಹಿತ್ಯ ಲೋಕದಲ್ಲಿ ಮಕ್ಕಳ ಸಾಹಿತ್ಯವನ್ನು ಒಳಗೊಂಡಂತೆ ಅಪಾರವಾದ ಕೃಷಿ ನಡೆಸಿದ್ದಾರೆ. ಅಲ್ಲದೆ ಅವರು ಬರೆದಿರುವ ಹಲವು ಕಾದಂಬರಿಗಳು ಸಿನಿಮಾಗಳಾಗಿ ಮೂಡಿಬಂದಿವೆ. ಇವುಗಳಲ್ಲಿ 'ಕಾಡಿನ ಬೆಂಕಿ' ಚಿತ್ರ ರಜತ ಕಮಲ ಪ್ರಶಸ್ತಿಯನ್ನ ಪಡೆದರೆ 'ದ್ವೀಪ' ಚಿತ್ರ ಸ್ವರ್ಣ ಕಮಲ ಪ್ರಶಸ್ತಿ ಗಳಿಸಿತ್ತು.
ನಾ. ಡಿಸೋಜ ಅವರು 75 ಕಾದಂಬರಿಗಳು, 6 ಚಾರಿತ್ರಿಕ ಕಾದಂಬರಿ, ಮಕ್ಕಳಿಗಾಗಿ 25 ಕಾದಂಬರಿ, 9 ಕಥಾ ಸಂಕಲನ, ಸಮಗ್ರ ಕಥೆಗಳ ಎರಡು ಸಂಪುಟಗಳು ಬರೆದಿದ್ದಾರೆ. 'ಮುಳುಗಡೆಯ ಊರಿಗೆ ಬಂದವರು' ಎಂಬ ಮಕ್ಕಳ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ 'ಬಾಲ ಸಾಹಿತ್ಯ ಪುರಸ್ಕಾರ’ ಸಂದಿದೆ. 'ದ್ವೀಪ' ಮತ್ತು 'ಕಾಡಿನ ಬೆಂಕಿ' ಕಾದಂಬರಿಗಳು ಚಲನಚಿತ್ರಗಳಾಗಿ ರಾಷ್ಟ್ರಿಯ ಪ್ರಶಸ್ತಿಯನ್ನು ಗಳಿಸಿವೆ.
ನಾ ಡಿಸೋಜ ಅವರು 2014 ವರ್ಷದಲ್ಲಿ ಮಡಿಕೇರಿಯಲ್ಲಿ ನೆಡೆದ 80 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು. ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯದ ಗೌರವಾನ್ವಿತ ಡಾಕ್ಟರೇಟ್ ಮುಂತಾದ ಅನೇಕ ಗೌರವಗಳು ಸಂದಿವೆ.
ಲೋಕೋಪಯೋಗಿ ಇಲಾಖೆಯಲ್ಲಿ ವೃತ್ತಿಜೀವನ ಪ್ರಾರಂಭಿಸಿದ್ದ ನಾ. ಡಿಸೋಜ ಅವರು ಶರಾವತಿ ಯೋಜನೆ, ಕಾರ್ಗಲ್, ಮಾಸ್ತಿಕಟ್ಟೆ, ತೀರ್ಥಹಳ್ಳಿ, ಸಾಗರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದರು. ನಾ. ಡಿಸೋಜ ಅವರು ಬರೆದಿರುವ ಕಾದಂಬರಿ ಆಧಾರಿತ ಶ್ರೀನಿವಾಸಮೂರ್ತಿ ನಿರ್ದೇಶನದ 'ಬಳುವಳಿ', ಕೋಡ್ಲು ರಾಮಕೃಷ್ಣರವರ ನಿರ್ದೇಶನದ 'ಬೆಟ್ಟದಪುರದ ದಿಟ್ಟ ಮಕ್ಕಳು' ಮತ್ತು ಮನು ನಿರ್ದೇಶನದ 'ಆಂತರ್ಯ' ಚಲನಚಿತ್ರಗಳು ಜನಪ್ರಿಯತೆ ಗಳಿಸಿವೆ.