ಢಾಕಾ: 'ಬಾಂಗ್ಲಾದೇಶದ ಸುಮಾರು 18 ಕೋಟಿ ಜನರಿಗೆ ದೀರ್ಘಕಾಲದಿಂದ ಮತದಾನದ ಹಕ್ಕನ್ನು ನಿರಾಕರಿಸಿಕೊಂಡು ಬರಲಾಗಿದೆ. ಈ ಲೋಪವನ್ನು ಸರಿಪಡಿಸುವ ಕೆಲಸ ಈಗ ನಡೆಯುತ್ತಿದೆ' ಎಂದು ಬಾಂಗ್ಲಾದೇಶದ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಎಎಂಎಂ ನಾಸಿರ್ ಉದ್ದೀನ್ ಭಾನುವಾರ ತಿಳಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಸಂಬಂಧ ಚುನಾವಣಾ ಅಧಿಕಾರಿಗಳ ತರಬೇತಿ ಕಾರ್ಯಕ್ರಮದಲ್ಲಿ ಈ ವಿಷಯ ತಿಳಿಸಿದ ಅವರು, 'ಈ ಲೋಪವನ್ನು ಸರಿಪಡಿಸಲು ನಾವು ಬದ್ಧರಾಗಿದ್ದು, ಅಚಲವಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ' ಎಂದರು.
'ಸಂಭಾವ್ಯ ಮತದಾರರ ಪಟ್ಟಿಯನ್ನು ನವೀಕರಿಸಲು ದೇಶದಾದ್ಯಂತ ಮನೆ ಮನೆಗೆ ಭೇಟಿ ನೀಡಿ ದತ್ತಾಂಶ ಸಂಗ್ರಹಿಸಲಾಗುವುದು. ಈ ಕಾರ್ಯಕ್ಕೆ ಜನವರಿ 20ರಿಂದ ಚಾಲನೆ ಸಿಗಲಿದೆ' ಎಂದು ಹೇಳಿದರು.
'ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆ ನಡೆಸುವುದು ಆಯೋಗದ ಮುಖ್ಯ ಗುರಿಯಾಗಿದೆ. ಏಕೆಂದರೆ ದೇಶವು ದೀರ್ಘಕಾಲದವರೆಗೆ ಅದರಿಂದ ವಂಚಿತವಾಗಿದೆ' ಎಂದು ಅವರು ತಿಳಿಸಿದರು.
'ಅವಾಮಿ ಲೀಗ್ ಆಡಳಿತಾವಧಿಯಲ್ಲಿ ನಡೆದ 2014, 2018 ಮತ್ತು 2024ರ ಚುನಾವಣೆಗಳಲ್ಲಿನ ನಡೆದಿರುವ ಅಕ್ರಮ ಮತ್ತು ಲೋಪಗಳ ಕುರಿತು ತನಿಖೆ ನಡೆಸಲು ಆಯೋಗ ನಿರ್ಧರಿಸಿದೆ' ಎಂದು ಅವರು ಹೇಳಿದರು.