ಹೈದರಾಬಾದ್: 'ಟಿಕೆಟ್‌ಗಾಗಿ ಸಾಲಿನಲ್ಲಿ ನಿಂತಿದ್ದವರ ಕಡೆಗೆ ಭಾರಿ ಸಂಖ್ಯೆಯಲ್ಲಿ ಭಕ್ತರು ಹಠಾತ್ತನೇ ನುಗ್ಗಿದರು. ಇದರಿಂದ ನೂಕು ನುಗ್ಗಲು ಹಾಗೂ ಕಾಲ್ತುಳಿತ ಉಂಟಾಯಿತು. ಇದರಿಂದಾಗಿಯೇ ಆರು ಜನರು ಮೃತಪಟ್ಟರು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತದೆ' ಎಂದು ತಿರುಪತಿ ಪೂರ್ವ ಠಾಣೆ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗಳಲ್ಲಿ ಹೇಳಲಾಗಿದೆ.
ತಿರುಪತಿಯಲ್ಲಿ ಬುಧವಾರ ವಾರ ರಾತ್ರಿ ಉಂಟಾದ ಕಾಲ್ತುಳಿತದಲ್ಲಿ ಐವರು ಮಹಿಳೆಯರು ಸೇರಿ ಆರು ಜನರು ಮೃತಪಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿ ಪೊಲೀಸರು ಎರಡು ಎಫ್‌ಐಆರ್ ದಾಖಲಿಸಿದ್ದಾರೆ.
'ಈ ಆರು ಜನರು ಆಕಸ್ಮಿಕವಾಗಿ ಕೆಳಗೆ ಬಿದ್ದರು. ಅವರನ್ನು ಕೂಡಲೇ ಎಸ್‌ವಿಆರ್‌ಆರ್‌ಜಿಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಕರ್ತವ್ಯದಲ್ಲಿದ್ದ ವೈದ್ಯರು ಪರೀಕ್ಷಿಸಿ, ಎಲ್ಲರೂ ಮೃತಪಟ್ಟಿದ್ದಾಗಿ ಘೋಷಿಸಿದರು' ಎಂದೂ ಎಫ್‌ಐಆರ್‌ಗಳಲ್ಲಿ ಉಲ್ಲೇಖಿಸಲಾಗಿದೆ.
'ತಮಿಳುನಾಡಿನ ಸೇಲಂ ಜಿಲ್ಲೆಯ ಮೆಟ್ಟೂರಿನ ಆರ್.ಮಲ್ಲಿಕಾ (50) ಅವರು ವಿಷ್ಣುನಿವಾಸಂ ಬಳಿ ಟೋಕನ್‌ಗಾಗಿ ಸರದಿಯಲ್ಲಿ ನಿಂತಿದ್ದರು. ನೂರಾರು ಭಕ್ತರು ದಿಢೀರ್‌ಗಾಗಿ ನುಗ್ಗಿದ್ದರಿಂದ, ಅನಾರೋಗ್ಯದಿಂದ ಬಳಲುತ್ತಿದ್ದ ಮಲ್ಲಿಕಾ ಅವರು ಕುಸಿದರು. ಅವರನ್ನು ಎಸ್‌ವಿಆರ್‌ಆರ್‌ಜಿಜಿ ಆಸ್ಪತ್ರೆಗೆ ದಾಖಲಿಸಲಾಯಿತು. ಅವರು ಮೃತಪಟ್ಟಿದ್ಧಾಗಿ ವೈದ್ಯರು ಘೋಷಿಸಿದರು' ಎಂದು ಮೊದಲ ಎಫ್‌ಐಆರ್‌ನಲ್ಲಿ ವಿವರಿಸಲಾಗಿದೆ.
ಈ ಘಟನೆ ಬಳಿಕ, ಬಾಲಯ್ಯಪಳ್ಳಿ ಮಂಡಲ ತಹಶೀಲ್ದಾರ್ ಪಿ.ಶ್ರೀನಿವಾಸುಲು ಅವರು ನೀಡಿರುವ ದೂರು ಆಧರಿಸಿ ಈ ಎಫ್‌ಐಆರ್ ದಾಖಲಿಸಲಾಗಿದೆ. ಮತ್ತೊಂದು ಎಫ್‌ಐಆರ್‌ನಲ್ಲಿ, ಐದು ಜನರ ಸಾವು ಕುರಿತು ವಿವರಿಸಲಾಗಿದೆ.
ವೈಕುಂಠ ಏಕಾದಶಿಯಂದು ವೆಂಕಟೇಶ್ವರ ದೇವರ ದರ್ಶನ ಪಡೆಯುವುದಕ್ಕಾಗಿ ಟಿಟಿಡಿ ವಿತರಿಸುವ ಕೂಪನ್ ಪಡೆಯಲು ಜನರು 12 ಗಂಟೆಗೂ ಹೆಚ್ಚು ಕಾದಿದ್ದರು. ವೈಕುಂಠ ಏಕಾದಶಿ ಜ.10ರಂದು ಇದೆ.
ಕಾಲ್ತುಳಿತ ಘಟನೆ ಕುರಿತು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ವಿರೋಧ ಪಕ್ಷ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ನೈತಿಕ ಹೊಣೆ ಹೊರಬೇಕು ಎಂದು ಆಗ್ರಹಿಸಿದೆ. 'ಹೆಚ್ಚುವರಿ ಇ.ಒ ಎಸ್‌ಪಿ ಹಾಗೂ ಅಧೀನ ಅಧಿಕಾರಿಗಳು ಟಿಟಿಡಿಯ ಜಾಗೃತ ದಳದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಬೇಕು. ಮೃತರ ಕುಟುಂಬಗಳಿಗೆ ತಲಾ ₹ 1ಕೋಟಿ ಗಾಯಗೊಂಡವರಿಗೆ ತಲಾ ₹20 ಲಕ್ಷ ಪರಿಹಾರ ನೀಡಬೇಕು' ಎಂದು ಟಿಟಿಡಿಯ ಮಾಜಿ ಅಧ್ಯಕ್ಷ ಹಾಗೂ ವೈಎಸ್‌ಆರ್‌ಸಿಯ ಹಿರಿಯ ನಾಯಕ ಬಿ.ಕರುಣಾಕರ ರೆಡ್ಡಿ ಆಗ್ರಹಿಸಿದ್ದಾರೆ.