ಮುಂಬೈ: 'ಅನಧಿಕೃತವಾಗಿ ಪ್ರವೇಶಿಸುವವರನ್ನು ತಡೆಯಲು ಕಾಲೇಜುಗಳಲ್ಲಿ ಪ್ರವೇಶ ನಿಯಂತ್ರಣ ವ್ಯವಸ್ಥೆ, ಸಿ.ಸಿ.ಟಿ.ವಿ. ಕ್ಯಾಮೆರಾ ಅಳವಡಿಸಬೇಕು' ಎಂದು ರಾಷ್ಟ್ರೀಯ ಮಹಿಳಾ ಆಯೋಗವು (ಎನ್‌ಸಿಡಬ್ಲ್ಯೂ) ರಚಿಸಿದ ಸತ್ಯಶೋಧನಾ ಸಮಿತಿಯು ಸಲಹೆ ನೀಡಿದೆ.
ಅಣ್ಣಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಸಿಡಬ್ಲ್ಯೂ ಸಮಿತಿ ರಚಿಸಿತ್ತು.
ಮಹಾರಾಷ್ಟ್ರ ನಿವೃತ್ತ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ದೀಕ್ಷಿತ್ ಸಮಿತಿಯ ಸದಸ್ಯರಾಗಿದ್ದಾರೆ.
'ಸಾರಿಗೆ ಬಸ್‌ಗಳಲ್ಲಿಯೂ ಸಿ.ಸಿ.ಟಿ.ವಿ. ಕ್ಯಾಮೆರಾ, ಕ್ಯಾಬ್‌ಗಳಲ್ಲಿ ಅಲರ್ಟ್ ಅಲಾರ್ಮ್ ಅಳವಡಿಕೆ, ಸತ್ಯಾಂಶ ತಿರುಚುವುದನ್ನು ತಡೆಯಲು ಎಫ್‌ಐಆರ್ ದಾಖಲಿಸುವ ವೇಳೆ ಆಡಿಯೊ-ವಿಡಿಯೊ ತಂತ್ರಜ್ಞಾನದ ಬಳಸಬೇಕು, ತನಿಖೆಯನ್ನು ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲು ಆದ್ಯತೆ ಕೊಡಬೇಕು, ತಂಡವು ಮಹಿಳಾ ಅಧಿಕಾರಿಗಳನ್ನು ಒಳಗೊಂಡಿರಬೇಕು, ತ್ವರಿತಗತಿಯಲ್ಲಿ ವಿಚಾರಣೆ ನಡೆಸಬೇಕು ಎಂದು ಸಲಹೆ ನೀಡಲಾಗಿದೆ' ಎಂದು ದೀಕ್ಷಿತ್ ತಿಳಿಸಿದ್ದಾರೆ.
ಸಮಿತಿಯು ಈಗಾಗಲೇ ವರದಿ ತಯಾರಿಸಿದ್ದು, ಮಹಿಳಾ ಆಯೋಗಕ್ಕೆ ಸಲ್ಲಿಸಲಿದೆ.
ಕಳೆದ ವಾರ ಚೆನ್ನೈನ ಅಣ್ಣಾ ವಿಶ್ವವಿದ್ಯಾಲಯದಲ್ಲಿ 19 ವರ್ಷದ ವಿದ್ಯಾರ್ಥಿನಿ ಮೇಲೆ ನಡೆದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗವು ಸ್ವಯಂಪ್ರೇರಿತವಾಗಿ ಕ್ರಮಕ್ಕೆ ಮುಂದಾಗಿದೆ. ಘಟನೆ ಕುರಿತು ವಿಚಾರಣೆ ನಡೆಸಲು ಇಬ್ಬರು ಸದಸ್ಯರನ್ನು ಒಳಗೊಂಡ ಸತ್ಯಶೋಧನಾ ಸಮಿತಿ ರಚಿಸಿತ್ತು. ಪ್ರಕರಣದ ಸಂಬಂಧ ಒಬ್ಬ ಆರೋಪಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.