ಫಿರೋಝಾಬಾದ್: ಉತ್ತರ ಪ್ರದೇಶದ ಫಿರೋಝಾಬಾದ್ ಬಳಿ ಪ್ರಾಚೀನ ದೇಗುಲಗಳು ಪತ್ತೆಯಾಗಿದ್ದು, ಪುರಾತತ್ವ ಇಲಾಖೆಯು ಉತ್ಖನನ ಆರಂಭಿಸಿದೆ.
ರಸಲ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕಾಶ್ಮೀರಿ ಗೇಟ್ ಪ್ರದೇಶದ ಮೊಹಮ್ಮದಿ ಮಸೀದಿ ಬಳಿ ಎರಡು ಸ್ಥಳಗಳಲ್ಲಿ ಈ ದೇವಾಲಯಗಳು ಎರಡು ದಿನಗಳ ಹಿಂದೆ ಪತ್ತೆಯಾಗಿವೆ.
ದೇವಾಲಯ ಪತ್ತೆಯಾದ ಸ್ಥಳದಲ್ಲಿ ಉತ್ಖನನ ನಡೆಸುವಂತೆ ಹಿಂದೂ ಪರ ಸಂಘಟನೆಗಳು ಒತ್ತಾಯಿಸಿದ ನಂತರ ಪೊಲೀಸ್ ಕಣ್ಗಾವಲಿನಲ್ಲಿ ಪ್ರಕ್ರಿಯೆ ಆರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಠಾಣಾಧಿಕಾರಿ ಅಂಜು ಕುಮಾರ್ ಸಿಂಗ್, 'ಹಿಂದೂ ಸಂಘಟನೆಗಳ ಒತ್ತಾಯದ ನಂತರ ಮುಸ್ಲಿಂ ಸಂಘಟನೆಗಳ ಮುಖಂಡರನ್ನೂ ಸಂಪರ್ಕಿಸಿ ಶಾಂತಿ ಸಭೆ ನಡೆಸಲಾಯಿತು. ನಂತರ ಉತ್ಖನನ ಆರಂಭಿಸಲಾಗಿದೆ' ಎಂದರು.
ಬಜರಂಗದಳದ ಜಿಲ್ಲಾಧ್ಯಕ್ಷ ಮೋಹನ್ ಬಜರಂಗಿ ಅವರು ಸ್ಥಳದಲ್ಲಿದ್ದು, 'ದೇವಾಲಯದ ರಚನೆ ನೋಡಿದರೆ ಇದು ಶಿವನ ದೇಗುಲದಂತೆ ಕಾಣಿಸುತ್ತಿದೆ. ಉತ್ಖನನ ಪೂರ್ಣಗೊಂಡ ನಂತರವಷ್ಟೇ ಅಲ್ಲಿರುವ ಮೂರ್ತಿ ಹಾಗೂ ಗೋಚರಿಸುವ ಇನ್ನಿತರ ಕಲಾಕೃತಿಗಳಿಂದ ದೇಗುಲದ ಇನ್ನಷ್ಟು ಮಾಹಿತಿ ಸಿಗಲಿದೆ' ಎಂದರು.
ಸ್ಥಳೀಯರಾದ ಅಕೀಲ್ ಅಹ್ಮದ್ ಅವರು ಮಾಹಿತಿ ನೀಡಿ, '60 ವರ್ಷಗಳ ಹಿಂದೆ ಈ ಕೃಷಿ ಭೂಮಿಯು ಹಿಂದೂ ಕುಟುಂಬಕ್ಕೆ ಸೇರಿದ್ದಾಗಿತ್ತು. ಈ ಪ್ರದೇಶದಲ್ಲಿ ಮುಸ್ಲಿಮರ ಸಂಖ್ಯೆ ಹೆಚ್ಚಳವಾದಂತೆ ಹಿಂದೂ ಕುಟುಂಬಗಳು ಈ ಸ್ಥಳ ತೊರೆದಿರುವ ಸಾಧ್ಯತೆ ಇದೆ. ರಾಮಗಢ ಪೊಲೀಸ್ ಠಾಣೆ ವ್ಯಾಪ್ತಿಯ 60 ಅಡಿ ರಸ್ತೆಯಲ್ಲಿರುವ ಚಿಶ್ತಿ ನಗರದಲ್ಲೂ ಒಂದು ದೇವಾಲಯ ಪತ್ತೆಯಾಗಿತ್ತು' ಎಂದಿದ್ದಾರೆ.
ರಾಮಗಢ ಠಾಣಾಧಿಕಾರಿ ಸಂಜೀವ್ ದುಬೇ ಅವರು ಮಾಹಿತಿ ನೀಡಿ, '50 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಆಗ ಇಲ್ಲಿ ದೇವಾಲಯ ನಿರ್ಮಾಣವಾಗಿತ್ತು. ಈಗ ಈ ಪ್ರದೇಶದಲ್ಲಿ ಮುಸ್ಲಿಂ ಪ್ರಾಬಲ್ಯ ಹೆಚ್ಚಾಗಿದೆ. ಉತ್ಖನನ ಆರಂಭಗೊಂಡಿದೆ. ಜತೆಗೆ ಈ ಪ್ರದೇಶದಲ್ಲಿ ಎರಡೂ ಧರ್ಮದವರಲ್ಲಿ ಭಾಂದವ್ಯ ಉತ್ತಮವಾಗಿದೆ' ಎಂದು ತಿಳಿಸಿದರು.