ಸೋಲ್ : ವಾಗ್ದಂಡನೆಗೆ ಗುರಿಯಾಗಿರುವ ದಕ್ಷಿಣ ಕೊರಿಯಾದ ಅಧ್ಯಕ್ಷ ಯೂನ್ ಸುಕ್ ಯೋಲ್ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯುವ ತನಿಖಾಧಿಕಾರಿಗಳ ಯತ್ನ ಶುಕ್ರವಾರ ಸುಮಾರು ಆರು ತಾಸು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು.
ಅಂತಿಮವಾಗಿ ಯೋಲ್ ಅವರು ವಾರಂಟ್ ನಿರಾಕರಿಸಿದ್ದು, ಅಧಿಕಾರಿಗಳು ವಿಚಾರಣೆ ನಡೆಸದೇ ಅಧಿಕೃತ ನಿವಾಸದಿಂದ ನಿರ್ಗಮಿಸಿದರು.
ಒಂದೇ ತಿಂಗಳಲ್ಲಿ ಇಬ್ಬರು ಮುಖಂಡರು ವಾಗ್ದಂಡನೆಗೆ ಗುರಿಯಾಗಿದ್ದು, ಈ ಘಟನೆಗಳು ದೇಶದಲ್ಲಿ ರಾಜಕೀಯ ಬಿಕ್ಕಟ್ಟಿಗೆ ಕಾರಣವಾಗಿವೆ.
ಅಧ್ಯಕ್ಷರ ವಿಚಾರಣೆ ಕುರಿತು ಹೇಳಿಕೆ ನೀಡಿರುವ ಭ್ರಷ್ಟಾಚಾರ ತನಿಖಾ ಸಂಸ್ಥೆಯು, 'ಅಧ್ಯಕ್ಷರ ಸುರಕ್ಷತೆಯ ನೆಪವೊಡ್ಡಿದ ಅವರ ಭದ್ರತಾ ಸೇವೆಯ ಸಿಬ್ಬಂದಿ ತನಿಖಾಧಿಕಾರಿಗಳು ಯೂನ್ ಅವರ ನಿವಾಸ ಪ್ರವೇಶಿಸದಂತೆ ಗಂಟೆಗಟ್ಟಲೆ ತಡೆದರು' ಎಂದು ಪ್ರತಿಕ್ರಿಯಿಸಿದೆ.
'ತನಿಖಾಧಿಕಾರಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದರು. ತನಿಖೆ ಕುರಿತಂತೆ ಅಧ್ಯಕ್ಷರ ಭದ್ರತಾ ಪಡೆಯೊಂದಿಗೆ ಹಲವು ಭಾರಿ ವಾಗ್ವಾದ ನಡೆಸಬೇಕಾಯಿತು. ದೇಶದ ಕಾನೂನು ಪ್ರಕ್ರಿಯೆಗೂ ಸಹಕರಿಸದ ಅವರ ವರ್ತನೆಗೆ ವಿಷಾದವಿದೆ' ಎಂದೂ ಪ್ರತಿಕ್ರಿಯಿಸಿದೆ.
ತೀವ್ರ ಚಳಿಯ ವಾತಾವರಣದಲ್ಲೂ ಅಧ್ಯಕ್ಷರ ನಿವಾಸದ ಹೊರಗೆ, ಯೋಲ್ ಅವರ ಬೆಂಬಲಿಗರು ದೊಡ್ಡ ಸಂಖ್ಯೆಯಲ್ಲಿ ಸುದೀರ್ಘ ಕಾಲ ಗುಂಪುಗೂಡಿದ್ದರು. ದಕ್ಷಿಣ ಕೊರಿಯಾ, ಅಮೆರಿಕದ ಧ್ವಜಹಿಡಿದಿದ್ದ ಬೆಂಬಲಿಗರು ಅಧ್ಯಕ್ಷರ ರಕ್ಷಣೆಗೆ ಆಗ್ರಹಿಸುವ ಘೋಷಣೆಗಳನ್ನು ಕೂಗಿದರು.
'ಅಧ್ಯಕ್ಷರ ಭದ್ರತಾ ಸೇವೆಯ ಮುಖ್ಯಸ್ಥರು ಮತ್ತು ಉಪ ಮುಖ್ಯಸ್ಥರನ್ನೂ ತನಿಖೆಗೆ ಒಳಪಡಿಸಲು ಈಗ ಸಂಸ್ಥೆ ನಿರ್ಧರಿಸಿದೆ. ಅಧಿಕೃತ ಕರ್ತವ್ಯಕ್ಕೆ ಅಡ್ಡಿಪಡಿಸಿದ ಕಾರಣಕ್ಕೆ ಸಮನ್ಸ್ ಜಾರಿ ಮಾಡಿದ್ದು, ಶನಿವಾರ ವಿಚಾರಣೆಗೆ ಬರಲು ಇಬ್ಬರಿಗೆ ಸೂಚಿಸಲಾಗಿದೆ' ಎಂದು ತನಿಖಾ ಸಂಸ್ಥೆ ತಿಳಿಸಿದೆ.