ಜೆರುಸಲೇಂ: ಹಮಾಸ್ ಜೊತೆಗಿನ ಗಾಜಾ ಯುದ್ಧ ವಿರಾಮ ಒಪ್ಪಂದ ಪೂರ್ಣಗೊಂಡಿಲ್ಲ. ಅಂತಿಮ ವಿವರಗಳ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಹೇಳಿದ್ದಾರೆ.
ಇಸ್ರೇಲ್ ಮತ್ತು ಹಮಾಸ್ ನಡುವೆ ಯುದ್ಧ ವಿರಾಮ ಒಪ್ಪಂದ ಆಗಿದೆ ಎಂದು ಅಮೆರಿಕ ಮತ್ತು ಕತಾರ್ ಘೋಷಿಸಿದ ಕೆಲ ಗಂಟೆಗಳ ನಂತರ ನೆತನ್ಯಾಹು ಹೇಳಿಕೆ ಹೊರಬಿದ್ದಿದೆ.
ಇದೇವೇಳೆ, ಕತಾರ್‌ನ ಪ್ರಧಾನಿ ಮತ್ತು ಅಧ್ಯಕ್ಷ ಜೋ ಬೈಡನ್ ಮಾಡಿದ ಘೋಷಣೆಯನ್ನು ಒಪ್ಪಿಕೊಳ್ಳುತ್ತಾರೆಯೇ ಎಂಬ ಬಗ್ಗೆಯೂ ನೆತನ್ಯಾಹು ಸ್ಪಷ್ಟವಾಗಿ ಏನನ್ನೂ ಹೇಳಿಲ್ಲ.
ಪ್ರಸ್ತುತ ನಡೆಯುತ್ತಿರುವ ಒಪ್ಪಂದ ಪ್ರಕ್ರಿಯೆಯ ಅಂತಿಮ ವಿವರಗಳು ಪೂರ್ಣಗೊಂಡ ಬಳಿಕ ಅಧಿಕೃತವಾಗಿ ಪ್ರತಿಕ್ರಿಯೆಯನ್ನು ನೀಡುವುದಾಗಿ ಹೇಳಿದ್ದಾರೆ.
ಬುಧವಾರ ಯುದ್ಧವಿರಾಮ ಘೋಷಣೆಯಾಗುತ್ತಿದ್ದಂತೆ ಬೀದಿಗಿಳಿದ ಪ್ಯಾಲೆಸ್ಟೇನಿಯನ್ನರು ಕುಣಿದು ಕುಪ್ಪಳಿಸಿ ಸಂಭ್ರಮಪಟ್ಟರು. ಜೋರಾಗಿ ಕಾರಿನ ಹಾರ್ನ್ ಮಾಡುತ್ತಾ ಓಡಾಡಿದರು.
'ನಮಗೆ ಈಗ ಆಗುತ್ತಿರುವ ಅನುಭವವನ್ನು ಯಾರೂ ಅನುಭವಿಸಲು ಸಾಧ್ಯವಿಲ್ಲ. ಅದೊಂದು ವರ್ಣನಾತೀತ ಭಾವನೆ' ಎಂದು ಮಧ್ಯ ಗಾಜಾದ ದೇರ್ ಅಲ್-ಬಲಾಹ್‌ನ ಮಹಮೂದ್ ವಾಡಿ ಎಂಬವರು ಹೇಳಿದ್ದಾರೆ.
ಇಸ್ರೇಲ್- ಹಮಾಸ್ ಯುದ್ಧದಲ್ಲಿ ಗಾಜಾದಲ್ಲಿ 46,000ಕ್ಕೂ ಹೆಚ್ಚು ಪ್ಯಾಲೆಸ್ಟೇನಿರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಹಮಾಸ್ ಬಂಡುಕೋರರು ಮತ್ತು ನಾಗರಿಕರು ಮೃತಪಟ್ಟಿದ್ದಾರೆ. ಈ ಪೈಕಿ ಅರ್ಧದಷ್ಟು ಮಹಿಳೆಯರು ಮತ್ತು ಮಕ್ಕಳು ಎಂದು ಮಾಹಿತಿ ಸಿಕ್ಕಿದೆ.
2023ರ ಅಕ್ಟೋಬರ್ 7ರಂದು ಹಮಾಸ್ ಉಗ್ರರು ದಕ್ಷಿಣ ಇಸ್ರೇಲ್‌ಗೆ ನುಗ್ಗಿ ಸುಮಾರು 1,200 ಜನರನ್ನು ಕೊಂದು, 250 ಜನರನ್ನು ಅಪಹರಿಸಿದ ಬಳಿಕ ಯುದ್ಧ ಆರಂಭವಾಗಿತ್ತು.