ಅಮೆರಿಕದ ಸಕ್ಷಮ ಪ್ರಾಧಿಕಾರದವರು ಅಕ್ರಮ ವಲಸಿಗರನ್ನು ಹುಡುಕಿ ಹುಡುಕಿ ಅವರ ದೇಶಕ್ಕೆ ಅಟ್ಟುತ್ತಿದ್ದಾರೆ. ಇದಕ್ಕೆ ಜಾಗತಿಕವಾಗಿ ಅನೇಕ ಗಣ್ಯರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಅಕ್ರಮ ವಲಸಿಗರ ಸಂಕಷ್ಟದ ಬಗ್ಗೆ ಅಮೆರಿಕದ ಖ್ಯಾತ ಗಾಯಕಿ ಹಾಗೂ ನಟಿ ಸೆಲೆನಾ ಗೋಮೇಜ್ ಅವರು ವಿಡಿಯೊ ಒಂದನ್ನು ಮಾಡಿ ತಮ್ಮ ಇನ್‌ಸ್ಟಾಗ್ರಾಂ ಖಾತೆಗೆ ಹಾಕಿದ್ದರು. ಕೆಲಹೊತ್ತಿನ ಬಳಿಕ ಅದನ್ನು ಡಿಲೀಟ್ ಮಾಡಿದ್ದರು.
ವಿಡಿಯೊದಲ್ಲಿ ಏನಿತ್ತು?
''ನಾನು ನಿಮಗೆ ಕ್ಷಮೆ ಕೇಳುತ್ತಿದ್ದೇನೆ, ನನ್ನ ಎಲ್ಲ ಜನರು ದಾಳಿಗೆ ಒಳಗಾಗುತ್ತಿದ್ದಾರೆ.. ಏನಾಗುತ್ತಿದೆಯೋ ಗೊತ್ತಾಗುತ್ತಿಲ್ಲ. ನನಗೆ ಏನೂ ತೋಚುತ್ತಿಲ್ಲ, ನಾನು ನಿಮಗೆ ಸಹಾಯ ಮಾಡಬೇಕೆಂದಿದ್ದೇನೆ. ಆದರೆ ಏನು ಮಾಡಬೇಕೆಂದು ತೋಚುತ್ತಿಲ್ಲ. ಆದರೆ, ಖಂಡಿತ ನಾನು ನಿಮಗೆ ಏನಾದರೂ ಮಾಡುತ್ತೇನೆ'' ಎಂದು ಕಣ್ಣೀರು ಹಾಕುತ್ತಾ ಮಾತನಾಡಿದ್ದಾರೆ.
ವಿಡಿಯೊ ಜೊತೆ ಮೆಕ್ಸಿನ್ ದೇಶದ ಬಾವುಟದ ಚಿತ್ರ ಹಾಕಿದ್ದಾರೆ.
ಸೆಲೆನಾ ಗೋಮೇಜ್ ಅಮೆರಿಕದಲ್ಲಿಯೇ ಹುಟ್ಟಿ ಬೆಳೆದು ಅಲ್ಲಿಯೇ ಸಾಧನೆ ಮಾಡಿದರೂ ಅವರ ತಂದೆ ಮೆಕ್ಸಿಕನ್ ಮೂಲದವರು. ಹೀಗಾಗಿ ಅವರು ವಲಸಿಗರ ಬಗ್ಗೆ ಅನುಕಂಪ ಹೊಂದಿದ್ದಾರೆ ಎಂದು ಚರ್ಚೆಯಾಗಿದೆ. ಅವರು ಪ್ರಸ್ತುತ ಟೆಕ್ಸಾಸ್‌ನಲ್ಲಿ ನೆಲೆಸಿದ್ದಾರೆ.
ಅನೇಕ ಅಮೆರಿಕನ್‌ರು ಸೆಲೆನಾ ಗೋಮೇಜ್ ಹೇಳಿಕೆಯನ್ನು ವಿರೋಧಿಸಿದ್ದಾರೆ. ಮೆಕ್ಸಿಕನ್ ಜನರ ಬಗ್ಗೆ ಅಷ್ಟು ಅನುಕಂಪ ಇದ್ದರೆ ಅಲ್ಲಿಯೇ ಹೋಗಿ ನೆಲೆಸಿ ಬಿಡಿ ಎಂದು ಹೇಳಿದ್ದಾರೆ. ಡಿಲೀಟ್ ಆಗಿರುವ ವಿಡಿಯೊ ವ್ಯಾಪಕವಾಗಿ ಹರಿದಾಡುತ್ತಿದೆ. ಈ ಕುರಿತು ಎನ್‌ಡಿಟಿವಿ ವರದಿ ಮಾಡಿದೆ.