ಇಂಫಾಲ: ಮಣಿಪುರದ ತೌಬಲ್ ಮತ್ತು ಇಂಫಾಲ್ ಪಶ್ಚಿಮ ಜಿಲ್ಲೆಗಳಲ್ಲಿ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೋಮವಾರ ನಡೆಸಿದ ಕಾರ್ಯಾಚರಣೆಯಲ್ಲಿ ತೌಬಲ್‌ನ ವೈಥೌ-ಥಿಯಾಮ್ ಐವಿಆರ್‌ನಿಂದ ನಿಷೇಧಿತ ಉಗ್ರಗಾಮಿ ಸಂಘಟನೆ ಕಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ ಸದಸ್ಯನನ್ನು ಬಂಧಿಸಲಾಗಿದೆ.
ಸಪಂ ಪೈಖೋಂಬಾ ಮೈತೇಯಿ ಬಂಧಿತ ವ್ಯಕ್ತಿ. ಆತನಿಂದ ವೈರ್‌ಲೆಸ್ ಹ್ಯಾಂಡ್‌ಸೆಟ್ ಮತ್ತು ಆರು 9 ಎಂಎಂ ಜೀವಂತ ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇಂಫಾಲ್ ಪಶ್ಚಿಮ ಜಿಲ್ಲೆಯ ಥೋಂಗ್ಜು ಪೆಚುಲಂಪಾಕ್ ಪುಖ್ರಿಯಿಂದ ನಿಷೇಧಿತ ಉಗ್ರಗಾಮಿ ಸಂಘಟನೆ ಕಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ ಸದಸ್ಯ ಸಮೋಮ್ ಡೇವಿಡ್ಸನ್ ಮೈತೇಯಿ ಎಂಬುವವನನ್ನು ಬಂಧಿಸಲಾಗಿದೆ. ಸಿಂಗ್‌ಜಮೇಯಿ-ಥೋಂಗ್ಜು ಪ್ರದೇಶದಲ್ಲಿ ಮತ್ತು ಸುತ್ತಮುತ್ತಲಿನ ಅಂಗಡಿಗಳ ಮಾಲೀಕರನ್ನು ಸುಲಿಗೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.