ಅಗರ್ತಲಾ: ಬಾಂಗ್ಲಾದೇಶದ ಗಡಿಗೆ ಹೊಂದಿಕೊಂಡಿರುವ ತ್ರಿಪುರಾದ ಉತ್ತರ ಭಾಗ ಕಾಂಚನಾಪುರದಲ್ಲಿ ಉಗ್ರಗಾಮಿಗಳ ಗುಂಪಿನ ಚಲನವಲನ ಇರುವ ಬಗ್ಗೆ ವರದಿಗಳು ಬಂದ ಹಿನ್ನೆಲೆ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಗುರುವಾರ ಪೊಲೀಸರು ತಿಳಿಸಿದ್ದಾರೆ.
ಬಾಂಗ್ಲಾದೇಶದ ರಂಗಮತಿ ಮತ್ತು ಖಗ್ರಾಚೆರಿ ಜಿಲ್ಲೆಗಳ 48 ಕಿ.ಮೀ ವ್ಯಾಪ್ತಿಯಲ್ಲಿ ತ್ರಿಪುರಾ ಅಂತರರಾಷ್ಟ್ರೀಯ ಗಡಿಯನ್ನು ಹಂಚಿಕೊಂಡಿದೆ.
ಈ ಗಡಿಯಲ್ಲಿ ಉಗ್ರಗಾಮಿಗಳ ಗುಂಪುಗಳ ಚಲನವಲನಗಳ ಬಗ್ಗೆ ವರದಿಯಾಗಿತ್ತು, ಆದರೆ ಉಗ್ರಗಾಮಿಗಳು ಇರುವ ಬಗ್ಗೆ ಯಾವುದೇ ಖಚಿತ ಮಾಹಿತಿ ಬಂದಿಲ್ಲ. ಮುಂಜಾಗ್ರತಾ ಕ್ರಮವಾಗಿ ಬಿಎಸ್‌ಎಫ್ ಮತ್ತು ತ್ರಿಪುರಾದ ರಾಷ್ಟ್ರೀಯ ರೈಫಲ್ಸ್ ತಂಡ ಗಡಿಯಲ್ಲಿ ಕಾವಲಿಗೆ ನಿಂತಿದೆ ಎಂದು ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
'ಗಡಿ ಪ್ರದೇಶ ಖಂಡಿತವಾಗಿಯೂ ಭದ್ರತೆಯಿಂದ ಕೂಡಿದೆ. ಉಗ್ರರಿರುವ ಬಗ್ಗೆ ಸಂದೇಹ ಇರುವ ಪ್ರದೇಶಗಳಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಕಾನೂನು ಸುವ್ಯವಸ್ಥೆ ನಿಯಂತ್ರಣದಲ್ಲಿದೆ' ಎಂದೂ ಮಾಹಿತಿ ನೀಡಿದ್ದಾರೆ.