ಮುಳ್ಳೇರಿಯ: ಅಡೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ದೇಗುಲದಲ್ಲಿ ನಡೆಯುತ್ತಿದ್ದ ವೈಭÀವದ ಶ್ರೀ ಕೌಂಡಿಕ್ಕಾನ ಯಾತ್ರಾ ಮಹೋತ್ಸವವು ಮೂಲ ಸ್ಥಾನದಿಂದ ಮೃತ್ತಿಕೆಯನ್ನು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು 12 ವರ್ಷಗಳ ಬಳಿಕ ಮತ್ತೆ ತಂದು ಶ್ರೀ ಬಿಂಬ ಚೈತನ್ಯ ವೃದ್ಧಿಗೊಳಿಸುವುದರೊಂದಿಗೆ ಮಂಗಳವಾರ ಸಂಪನ್ನಗೊಂಡಿತು.
ಮಂಗಳವಾರ ಮುಂಜಾನೆ 3ಗಂಟೆಗೆ ನಡೆ ತೆರೆದು, ಕೊಡಿಮರದಡಿಯಲ್ಲಿ ಮಹಾಪ್ರಾರ್ಥನೆ ನಡೆಸಲಾಯಿತು. ಅನಂತರ ಮುಂಜಾನೆ 3.45ಕ್ಕೆ ದಕ್ಷಿಣ ದ್ವಾರದ ಮೂಲಕ ಎಡವಳ ವಿಭಾಗದವರ ಸಹಿತ ಶ್ರೀ ಕೌಂಡಿಕ್ಕಾನ ಯಾತ್ರೆ ಆರಂಭಗೊಂಡಿತು. ಈ ಸಂದರ್ಭದಲ್ಲಿ 1500 ಮಂದಿ ವ್ರತಧಾರಿ ಭಕ್ತರು ಬರಿಗಾಲಲ್ಲಿ ನಡೆದು 5ಕಿ.ಮೀ. ಸಾಗಿದರು. ಕೌಂಡಿಕ್ಕಾನದಲ್ಲಿ 1008 ಸೀಯಾಳ ಬಳಸಿ ತಂಬಿಲ ಸೇವೆ ನಡೆಸಿದ ನಂತರ 8.15ರ ಹೊತ್ತಿಗೆ ಮೂಲಸ್ಥಾನದತ್ತ ಮೃತ್ತಿಕಾ ಸಂಗ್ರಹಕ್ಕಾಗಿ ತೆರಳಲಾಯಿತು. ಎಡವಳ ಬೆಳ್ಳಿಯಪ್ಪ ಕರಿಕೆ ದಾರಿ ತೋರಿಸುತ್ತಾ ಮುಂದೆ ಸಾಗಿದರು. ಅನಂತರ ದೀಪ ಹಿಡಿದುಕೊಂಡು ಶಶಿಧರನ್ ನಂಭೀಶ, ಅವರ ನಂತರ ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು, ಜೊತೆಗೆ ಬ್ರಹ್ಮಶ್ರೀ ರವೀಶ ತಂತ್ರಿಗಳೂ ಸಾಗಿದರು. ಬೆಳಿಗ್ಗೆ 10.30ಕ್ಕೆ ಮೃತ್ತಿಕೆಯನ್ನು ಶ್ರೀ ಮೂಲಸ್ಥಾನದಿಂದ ಸಂಗ್ರಹಿಸಿ ಬ್ರಹ್ಮಶ್ರೀ ವಾಸುದೇವ ತಂತ್ರಿ ಹಿಂತಿರುಗಿ ಕೌಂಡಿಕ್ಕಾನ ಪ್ರದೇಶಕ್ಕೆ ಬಂದರು. ಕಾತುರದಿಂದ ಕಾಯುತ್ತಿದ್ದ ಸಾವಿರಾರು ವ್ರತಧಾರಿ ಭಕ್ತರು ಓಂ ನಮಃ ಶಿವಾಯ ಮಂತ್ರ ಜಪಿಸಿದರು. ಗೋವಿಂದ ನಾಮಸ್ಮರಣೆ ಮಾಡಿದರು. ವಾದ್ಯ ಮೇಳಗಳೊಂದಿಗೆ ಮಧ್ಯಾಹ್ನ 12ಗಂಟೆಯ ಹೊತ್ತಿಗೆ ಶ್ರೀಕ್ಷೇತ್ರಕ್ಕೆ ಆಗಮಿಸಿದರು. ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ದೇಗುಲಲ್ಲಿ ಇವರ ಬರವನ್ನು ಕಾಯುತ್ತಾ ಮಂತ್ರ ಪಠಣ, ಭಜನೆಯನ್ನು ನಡೆಸಿದರು. ಶ್ರೀಕ್ಷೇತ್ರದಲ್ಲಿ ಬಿಂಬ ಚೈತನ್ಯ ವೃದ್ಧಿ, ಧನುಪೂಜೆ, ಸಹಸ್ರ(1008) ಕುಂಭಾಭಿಷೇಕ, ಪಲ್ಲಪೂಜೆ ನಡೆಯಿತು. ಸಂಜೆ ಎಲ್ಲಾ ಭಕ್ತರಿಗೂ ಮೂಲ ಮೃತ್ತಿಕಾ ಪ್ರಸಾದ ವಿತರಣೆ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಕುಂಟಾರು ಬ್ರಹ್ಮಶ್ರೀ ವಾಸುದೇವ ತಂತ್ರಿಯವರಿಗೆ ಗೌರವಾರ್ಪಣೆ ಮಾಡಲಾಯಿತು. ರಾತ್ರಿ ಶ್ರೀ ದೇವರ ಉತ್ಸವ ಬಲಿ ನಡೆಯಿತು.
ಸಂಭ್ರಮದ ವಾತಾವರಣ-
ಅಡೂರು ದೇಗುಲದ ಕೌಂಡಿಕ್ಕಾನ ಯಾತ್ರಾಮಹೋತ್ಸವವು ಹಬ್ಬದ ವಾತಾವರಣವನ್ನು ಉಂಟು ಮಾಡಿದೆ. ಕಳೆದ 12 ದಿನಗಳಿಂದ ವ್ರತಧಾರಿಗಳಾಗಿ ದೇಗುಲದ ಈ ಪುಣ್ಯ ಸಂದರ್ಭಕ್ಕಾಗಿ ಕಾದು ಕುಳಿತ ಭಕ್ತಾದಿಗಳು ಈ ಸುಸಂದರ್ಭದಲ್ಲಿ ತಮ್ಮನ್ನು ತೊಡಗಿಸಿಕೊಂಡು ಪುನೀತರಾದರು. ಮಂಗಳವಾರ ಸುಮಾರು 15ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ತಳಿರು ತೋರಣಗಳಿಂದ ಅಡೂರು ಶೃಂಗಾರಗೊಂಡು ಕಾರ್ಯಕ್ರಮದ ಯಶಸ್ವಿಗಾಗಿ 34 ಪ್ರದೇಶಿಕ ಸಮಿತಿಗಳ ಸ್ವಯಂ ಸೇವಕರ ತಂಡಗಳು ಅಹರ್ನಿಶಿ ದುಡಿದರು. ಭಜನೆ ಸಂಕೀರ್ತನೆ, ಶಿವ ನಾಮಸ್ಮರಣೆ, ಗೀತಾ ಪಾರಾಯಣದ ಮೂಲಕ ಇಡೀ ಅಡೂರು ಭಕ್ತಿ ಸಾಂದ್ರವಾಗಿತ್ತು.